ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದಕ್ಕೆ ಪೊಲೀಸರಿಂದ ನೋಟಿಸ್ ಪಡೆದಿದ್ದ ನಟ ಚಿಕ್ಕಣ್ಣ ಬಸವೇಶ್ವರನಗರದಲ್ಲಿರುವ ತನಿಖಾಧಿಕಾರಿ ಮುಂದೆ ಗುರುವಾರ ಹಾಜರಾದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಹಿಂದೆ ವಿಚಾರಣೆ ಎದುರಿಸಿದ್ದ ನಟ ಚಿಕ್ಕಣ್ಣ ನ್ಯಾಯಾಧೀಶರ ಮುಂದೆಯೂ ಹಾಜರಾಗಿದ್ದರು. ಸಿಆರ್ ಪಿಸಿ 164 ಅಡಿಯಲ್ಲಿ ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿತ್ತು. ಈಗ ದರ್ಶನ್ ಅವರನ್ನು ಕಾಣಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರಿಂದ ನಟ ಚಿಕ್ಕಣ್ಣನನ್ನು ಮತ್ತೆ ಈ ಬಾರಿ ಎಸಿಪಿ ಚಂದನ್ ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗಿದೆ.
ವಿಚಾರಣೆ ಬಳಿಕ ಪ್ರತಿಕ್ರಿಯಿಸಿದ ಚಿಕ್ಕಣ್ಣ, ನಾನೊಬ್ಬ ಸಾಕ್ಷಿದಾರನಾಗಿದ್ದುಕೊಂಡು ಜೈಲಿಗೆ ಹೋಗಿ ದರ್ಶನ್ ಜತೆಗೆ ಮಾತನಾಡಿಸಬಾರದು ಎಂಬುದು ನನಗೆ ತಿಳಿದಿರಲಿಲ್ಲ. ಹಾಗಾಗಿ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದೆ. ಹೀಗಾಗಿ ಪೊಲೀಸರು ವಿಚಾರಣೆಗೆ ಬರುವಂತೆ ನಿನ್ನೆ ಬುಧವಾರ ನೋಟಿಸ್ ಕೊಟ್ಟು 9 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡಲಾಗಿತ್ತು. ಈ ನಿಟ್ಟಿನಲ್ಲಿ ಗುರುವಾರ ಬಂದು ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಹೇಳಿದರು.
ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರ ಬಗ್ಗೆ ಒಂದಷ್ಟು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿದ್ದಿನಿ. ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ. ಸದ್ಯ ವಿಚಾರಣೆಗೆ ಬರುವುದಕ್ಕೆ ಹೇಳಿಲ್ಲ. ಸಾಕ್ಷಿದಾರ ಹೋಗಬಾರದು ಅನ್ನೋದು ನನಗೆ ತಿಳಿದಿರಲಿಲ್ಲ, ಗೊತ್ತಿದ್ದರೆ ಹೋಗಿ ದರ್ಶನ್‌ನನ್ನು ಜೈಲಿನಲ್ಲಿ ಭೇಟಿ ಆಗುತ್ತಿರಲಿಲ್ಲ ಎಂದು ಚಿಕ್ಕಣ್ಣ ಪ್ರತಿಕ್ರಿಯಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಭೇಟಿಗೆ ತೆರಳಿದ್ದ ನಟ ಚಿಕ್ಕಣ್ಣನ ಜೊತೆ ಈ ಸಂದರ್ಭದಲ್ಲಿ ಅಭಿಷೇಕ್ ಅಂಬರೀಶ್ , ಧನ್ವೀರ್ ಕೂಡ ಇದ್ದರು. ಅಲ್ಲಿ ದರ್ಶನ್ ಭೇಟಿ ಮಾಡಿ ಕೆಲಕಾಲ ಚಿಕ್ಕಣ್ಣ ಮಾತುಕತೆ ನಡೆಸಿದ್ದರು. ನಟ ದರ್ಶನ್ ನನ್ನು ಭೇಟಿ ಮಾಡಿದ ಕಾರಣಕ್ಕಾಗಿ ಪೊಲೀಸರಿಂದ ಚಿಕ್ಕಣ್ಣಗೆ ನೊಟೀಸ್ ನೀಡಲಾಗಿತ್ತು.