ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಯಾಕೋ ಇತ್ತೀಚೆಗೆ ಗ್ರಹಗತಿಗಳೇ ಸರಿ ಇಲ್ಲವೇನೋ.. ಪದೇ ಪದೇ ಅವರ ಹೆಸರಿನಲ್ಲಿ ಒಂದಲ್ಲಾ ಒಂದು ವಿವಾದವಾಗುತ್ತಲೇ ಇದೆ.
ಕಳೆದ ಆರು ತಿಂಗಳಲ್ಲಿ ದರ್ಶನ್ ವಿರುದ್ಧ ಹಲವು ದೂರು, ವಿವಾದಗಳು ದಾಖಲಾಗಿವೆ. ಕೆಲವೊಂದರಲ್ಲಿ ದರ್ಶನ್ ನೇರವಾಗಿ ಸಿಲುಕಿಕೊಂಡರೆ ಮತ್ತೆ ಕೆಲವುದರಲ್ಲಿ ಪರೋಕ್ಷವಾಗಿ ಅವರು ಕಾನೂನಿನ ಸಂಕಷ್ಟಕ್ಕೀಡಾಗಿದ್ದು ಇದೆ. ಕಳೆದ ಆರು ತಿಂಗಳಲ್ಲಿ ದರ್ಶನ್ ಸುತ್ತ ಸುತ್ತಿಕೊಂಡ ವಿವಾದಗಳು ಯಾವುವೆಲ್ಲಾ ನೋಡೋಣ.
ಹುಲಿ ಉಗುರು ಲಾಕೆಟ್ ವಿವಾದ: ಇತ್ತೀಚೆಗೆ ಸುದ್ದಿ ಮಾಡಿದ ಪ್ರಕರಣಗಳಲ್ಲಿ ಹುಲಿ ಉಗುರಿನ ಲಾಕೆಟ್ ಧರಿಸಿದ ವಿವಾದವೂ ಒಂದು. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಂತೇ ಹುಲಿ ಉಗುರಿನ ಲಾಕೆಟ್ ಧರಿಸಿದ ಅನೇಕ ಸೆಲೆಬ್ರಿಟಿಗಳಿಗೂ ಅರಣ್ಯ ಇಲಾಖೆ ನೋಟಿಸ್ ನೀಡಿತ್ತು. ಅವರಲ್ಲಿ ದರ್ಶನ್ ಕೂಡಾ ಒಬ್ಬರು.
ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ದರ್ಶನ್ ಅವರ ಮನೆಯ ನಾಯಿ ಅವರ ಮನೆ ಪಕ್ಕದಲ್ಲಿ ಕಾರು ಪಾರ್ಕ್ ಮಾಡಿದ್ದ ಮಹಿಳೆಗೆ ಕಚ್ಚಿದ್ದ ವಿಚಾರವಾಗಿ ದರ್ಶನ್ ಮನೆಯ ಸಿಬ್ಬಂದಿಗಳು ಮತ್ತು ಮಹಿಳೆಯ ನಡುವೆ ಘರ್ಷಣೆಯಾಗಿತ್ತು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ಸ್ವತಃ ದರ್ಶನ್ ವಿಚಾರಣೆಗೆ ಆರ್ ಆರ್ ನಗರ ಪೊಲೀಸ್ ಠಾಣೆಗೆ ಹಾಜರಾಗಬೇಕಾಯಿತು.
ಪಬ್ ನಲ್ಲಿ ಪಾರ್ಟಿ ವಿವಾದ: ಕಾಟೇರ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ತಮ್ಮ ಸ್ನೇಹಿತ ಕಲಾವಿದರೊಂದಿಗೆ ಪಬ್ ಒಂದರಲ್ಲಿ ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ವಿಚಾರವಾಗಿ ದರ್ಶನ್ ಜೊತೆಗೆ ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ನಿನಾಸಂ ಸತೀಶ್ ಸೇರಿದಂತೆ ಅವರ ಆಪ್ತರೂ ಪೊಲೀಸರ ವಿಚಾರಣೆ ಎದುರಿಸಬೇಕಾಯಿತು.
ಪವಿತ್ರಾ ಗೌಡ-ವಿಜಯ ಲಕ್ಷ್ಮಿ ದರ್ಶನ್ ವಾರ್: ಇತ್ತೀಚೆಗೆ ಪವಿತ್ರಾ ಗೌಡ ನಟ ದರ್ಶನ್ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ವಿಜಯಲಕ್ಷ್ಮಿ ದರ್ಶನ್ ಸಿಟ್ಟಿಗೆ ಕಾರಣವಾಗಿತ್ತು. ಈ ವೇಳೆ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಒಂದು ರೀತಿಯ ಚಿತ್ರಣ ಸಿಕ್ಕಿತ್ತು.
ಮಹಿಳೆಯರಿಗೆ ಅವಹೇಳನ ಆರೋಪ: ವೃತ್ತಿ ಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ದರ್ಶನ್ ಸಮಾರಂಭದಲ್ಲಿ ಮಾತನಾಡುವಾಗ ಈವತ್ತು ಇವಳಿರ್ತಾರೆ ನಾಳೆ ಅವಳಿರ್ತಾಳೆ ಎನ್ನುವ ಪದ ಬಳಕೆ ಮಾಡಿದ್ದರಿಂದ ಮಹಿಳೆಯರಿಗೆ ಅವಹೇಳನ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಕಾಟೇರ ಟೈಟಲ್ ವಿವಾದ: ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಹಳೆಯ ನಿರ್ಮಾಪಕ, ದೋಸ್ತು ಉಮಾಪತಿ ಗೌಡರನ್ನು ತಗಡು ಎಂದು ಕರೆದು ಎಚ್ಚರಿಕೆ ನೀಡಿದ್ದರು. ಈ ವಿವಾದ ಈಗ ಭಾರೀ ಸದ್ದು ಮಾಡುತ್ತಿದೆ.