ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ, ಮಾಜಿ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಅವರಿಗೆ 71 ವರ್ಷವಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಶಿವರಾಮ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಕಳೆದ 20 ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದರು. ಆದರೆ ಮೊನ್ನೆ ಅವರಿಗೆ ಹೃದಯಾಘಾತವೂ ಆಗಿತ್ತು. ಜೊತೆಗೆ ಮೆದುಳು ನಿಷ್ಕ್ರಿಯಗೊಂಡಿತ್ತು. ಕಿಡ್ನಿ ವೈಫಲ್ಯಕ್ಕೀಡಾಗಿದ್ದರು. ಇದೀಗ ಕೊನೆಯುಸಿರಳೆದಿದ್ದಾರೆ ಎಂದು ಅವರ ಆಪ್ತರಿಂದ ತಿಳಿದುಬಂದಿದೆ.
ನಟನಾಗಿ ಮಾತ್ರವಲ್ಲದೆ, ಅಧಿಕಾರಿಯಾಗಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಹೆಗ್ಗಳಿಕೆ ಅವರದ್ದಾಗಿತ್ತು. ಬಳಿಕ ನಟನೆಯಲ್ಲಿ ಆಸಕ್ತಿ ಇದ್ದಿದ್ದರಿಂದ ಸರ್ಕಾರೀ ಕೆಲಸಕ್ಕೆ ರಾಜೀನಾಮೆ ನೀಡಿ ಸಿನಿಮಾದತ್ತ ಹೊರಳಿದ್ದರು.
ಬಾನಲ್ಲೇ ಮಧುಚಂದ್ರಕೆ, ವಸಂತ ಕಾವ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ರಾಜಕೀಯಕ್ಕೂ ಸೇರ್ಪಡೆಯಾಗಿದ್ದರು. ಬಿಜೆಪಿ ಪಕ್ಷಕ್ಕಾಗಿ ಕೆಲವು ಸಮಯ ದುಡಿದರು. ಇದೀಗ ಅವರಿಲ್ಲ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು, ಕುಟುಂಬಸ್ಥರು, ಸಿನಿ ಸ್ನೇಹಿತರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.