ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಭೇಟಿ ನೀಡಿರುವ ಸುರ್ಯ ದೇವಸ್ಥಾನದ ಕಾರಣಿಕ ತಿಳಿದರೆ ನಿಮಗೂ ಅಚ್ಚರಿ

Sampriya

ಮಂಗಳವಾರ, 6 ಆಗಸ್ಟ್ 2024 (15:52 IST)
Photo Courtesy X
ಬೆಳ್ತಂಗಡಿ: ದಕ್ಷಿಣ ಕನ್ನಡದ ಸುಪ್ರಸಿದ್ಧ ದೇವಾಲಯ ಎಂದಾಗಲೆಲ್ಲ ಮೊದಲು ನೆನಪಾಗುವುದು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ. ಈ ದೇವಸ್ಥಾನಗಳಿಗೆ ದೇಶದ ಮೂಲೇ ಮೂಲೆಗಳಿಂದ ಭಕ್ತರು ಬಂದು, ಹರಕೆ, ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಇಲ್ಲಿರುವ ಸಾಕಷ್ಟು ಕಾರಣಿಕದ ದೇವಸ್ಥಾನಗಳಲ್ಲಿ ಸುರ್ಯದ ಸದಾಶಿವ ದೇವಾಲಯವೂ ಒಂದು.

ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದಲ್ಲಿರುವ ಸುರ್ಯ ಸದಾಶಿವ ದೇವಾಲಯದ ವಿಶೇಷತೆ ಏನೆಂದರೆ ಮಣ್ಣಿನ ಹರಕೆ.

ಹೆಚ್ಚಾಗಿ ಈ ದೇವಸ್ಥಾನದಲ್ಲಿ ಹರಕೆಯ ರೂಪದಲ್ಲಿ ಮಕ್ಕಳ ರೂಪದ ಮಣ್ಣಿನ ಬೊಂಬೆಗಳನ್ನು ಹೆಚ್ಚಾಗಿ ಕಾಣಬಹುದು. ಆರೋಗ್ಯ, ವೃತ್ತಿ, ಜಾನುವಾರುಗಳಲ್ಲಿ ಅನಾರೋಗ್ಯ ಹೀಗೇ ಯಾವುದೇ ಸಮಸ್ಯೆ ಬಂದಾಗ ಮನಸ್ಸಲ್ಲೇ ಸಂಕಲ್ಪ ಮಾಡಿಕೊಂಡು ಅಕ್ಕಿ, ನಾಣ್ಯ ಕಟ್ಟಿಟ್ಟು ಪ್ರಾರ್ಥಿಸಿದರೆ ಸಾಕು. ನಮ್ಮ
ಕಷ್ಟ ಪರಿಹಾರವಾಗುತ್ತದೆ. ಇದಕ್ಕೆ ಇಲ್ಲಿ ಸಲ್ಲಿಕೆಯಾಗಿರುವ ಮಣ್ಣಿನ ಬೊಂಬೆಗಳೇ ಸಾಕ್ಷಿ.

ಇದೀಗ ದಕ್ಷಿಣ ಕನ್ನಡದ ಪವರ್‌ಫುಲ್ ದೇವಸ್ಥಾನಗಳಲ್ಲಿ ಒಂದಾಗಿರುವ ಸುರ್ಯ ದೇವಾಲಯಕ್ಕೆ ನಟ ಯಶ್ ದಂಪತಿ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್. ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಮಣ್ಣಿನ ಹರಕೆಯನ್ನು ಸಲ್ಲಿಸಿದ್ದಾರೆ.

ಈ ವೇಳೆ 'ಟಾಕ್ಸಿಕ್' ಚಲನಚಿತ್ರದ ನಿರ್ದೇಶಕ ವೆಂಕಟ್ ವರು ಯಶ್ ದಂಪತಿಗೆ ಸಾಥ್ ನೀಡಿದ್ದಾರೆ.

ದೇವಸ್ಥಾನದ ಇತಿಹಾಸ:  ನೂರಾರು ವರ್ಷಗಳ ಇತಿಹಾಸವಿರುವ ಸುರ್ಯ ದೇವಸ್ಥಾನವು ಈ ಹಿಂದೆ  ಇದು ಮಹರ್ಷಿಗಳ ತಪೋಭೂಮಿಯಾಗಿತ್ತು. ಭೃಗು ಮಹರ್ಷಿಗಳ ಶಿಷ್ಯರೊಬ್ಬರು ತಪ್ಪಸ್ಸಿಗೆ ಶಿವ ಪಾರ್ವತಿ ಒಲಿದು ಪ್ರತ್ಯಕ್ಷರಾದರಂತೆ. ಋಷಿಯ ಕೋರಿಕೆಯಂತೆ ಇಲ್ಲೇ ಲಿಂಗ ರೂಪದಲ್ಲಿ ನೆಲೆಯಾದರಂತೆ. ‌‌

ಕೆಲ ಕಾಲದ ಬಳಿಕ ಈ ಪ್ರದೇಶಕ್ಕೆ ಸೊಪ್ಪು ತರಲೆಂದು ಬಂದ ಮಹಿಳೆಯ ಕತ್ತಿ ಕಲ್ಲಿಗೆ ತಾಗಿತು. ಅದು ಶಿವ ಲಿಂಗರೂಪಿಯಾಗಿ ನೆಲೆಸಿದ್ದ ಶಿಲೆ. ಕೂಡಲೇ ಅದರಿಂದ ರಕ್ತ ಚಿಮ್ಮಿತು. ಗಾಬರಿಗೊಂಡ ಆಕೆ ತಮ್ಮ ಮಗನನ್ನು ಸುರಿಯ ಎಂದು ಕೂಗಿದಳಂತೆ. ಆ ಬಳಿಕ ಈ ಊರು ಸುರ್ಯ ಎಂದು ಪ್ರಸಿದ್ಧಿ ಪಡೆಯಿತು.

ನಂತರ ಆ ಲಿಂಗರೂಪಿ ಶಿಲೆಗೆ ದೇವಾಲಯ ನಿರ್ಮಿಸಿ ಪೂಜಿಸಲಾಯಿತು. ಸುಮಾರು ಹದಿಮೂರನೆಯ ಶತಮಾನದಲ್ಲಿ ಬಂಗ ಅರಸರು ಚಿಕ್ಕದಾಗಿದ್ದ ಈ ಸದಾಶಿವನ ಗುಡಿಯನ್ನು ಮರು ನಿರ್ಮಾಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ