ಬೆಂಗಳೂರು: ಸಿನಿಮಾ ರಂಗದಲ್ಲಿನ ಸೇವೆ ಗಮನಿಸಿ ತುಮಕೂರು ವಿವಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದು ಅವರ ಕಾರಣ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ಕ್ಕೂ ಹೆಚ್ಚು ವರ್ಷಗಳಾಗಿವೆ. ಈವರೆಗೆ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ವಿಭಿನ್ನ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಮನರಂಜನೆ ಮತ್ತು ನಟನಾ ಕ್ಷೇತ್ರದಲ್ಲಿ ಅವರ ಸೇವೆ ಗಮನಿಸಿ ತುಮಕೂರು ವಿವಿ ಈ ಬಾರಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು.
ತುಮಕೂರು ವಿವಿ ಸಿಂಡಿಕೇಟ್ ಈ ಬಗ್ಗೆ ಚರ್ಚಿಸಿ ಒಮ್ಮತದ ನಿರ್ಧಾರ ತೆಗೆದುಕೊಂಡು ಕಿಚ್ಚ ಸುದೀಪ್ ಗಮನಕ್ಕೆ ತಂದಿತ್ತು. ತಮಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿರುವ ತುಮಕೂರು ವಿವಿ ನಿರ್ಧಾರಕ್ಕೆ ಗೌರವಪೂರ್ವಕವಾಗಿ ಧನ್ಯವಾದ ಸಲ್ಲಿಸಿರುವ ಸುದೀಪ್ ಡಾಕ್ಟರೇಟ್ ಸ್ವೀಕರಿಸಲು ವಿನಮ್ರವಾಗಿ ನಿರಾಕರಿಸಿದ್ದಾರೆ.
ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಸಮಾಜದಲ್ಲಿ ತಮಗಿಂತಲೂ ಹೆಚ್ಚು ಸಾಧನೆ ಮಾಡಿದವರಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ನೀಡಿ ಎಂದು ಸುದೀಪ್ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಗಸ್ಟ್ 17 ರಂದು ತುಮಕೂರು ವಿವಿ ಆವರಣದಲ್ಲಿ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದ್ದಾರೆ. ಇದೀಗ ಸುದೀಪ್ ನಿರಾಕರಿಸಿದ್ದು, ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆಲವರಿಗೆ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತಿದೆ.