ರಾಜಕೀಯ ಸೇರ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್? ತೆರೆಮರೆ ನಡೆದಿದೆ ಭಾರೀ ಪ್ಲ್ಯಾನ್!
ಗುರುವಾರ, 31 ಆಗಸ್ಟ್ 2017 (10:53 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸುತ್ತೇನೆಂದು ಹೊರಟ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ರಾಜಕೀಯ ಸೇರಲಿದ್ದಾರೆ ಎಂಬ ಸುದ್ದಿ ಬಂದಿದೆ.
ಆದರೆ ದರ್ಶನ್ ಪ್ರತ್ಯೇಕ ಪಕ್ಷ ಸ್ಥಾಪನೆಗೇನೂ ಮುಂದಾಗಿಲ್ಲ. ಬದಲಾಗಿ ಕಾಂಗ್ರೆಸ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಭಾರೀ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.
ಸ್ವತಃ ಸಿಎಂ ಸಿದ್ದರಾಮಯ್ಯ ಹಿರಿಯ ನಾಯಕ, ನಟ ಅಂಬರೀಷ್ ಗೆ ದರ್ಶನ್ ಮನ ಒಲಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಂಬರೀಷ್ ಕೂಡಾ ದರ್ಶನ್ ಜತೆ ಮಾತುಕತೆ ನಡೆಸಿದ್ದು, ಯಾವುದೇ ನಿರ್ಧಾರ ತಿಳಿಸಿಲ್ಲ ಎಂಬ ಸುದ್ದಿ ಕೇಳಿಬಂದಿದೆ.
ಅತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದರ್ಶನ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದಿದ್ದಾರೆ. ಹಲವಾರು ಬಾರಿ ನಾಡಿಗಾಗಿ ಧ್ವನಿಯೆತ್ತಿದವರು ದರ್ಶನ್. ಹಾಗಾಗಿ ಅವರಂತಹವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದಿದ್ದಾರೆ.
ಚಿತ್ರರಂಗದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಪಕ್ಷಕ್ಕೆ ಬಂದರೆ ಮಂಬರುವ ಚುನಾವಣೆಯಲ್ಲಿ ಭಾರೀ ಲಾಭವಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಗಿದೆ. ಆದರೆ ಚಾಲೆಂಜಿಂಗ್ ಸ್ಟಾರ್ ಈ ಸವಾಲು ಸ್ವೀಕರಿಸುತ್ತಾರಾ ಕಾದು ನೋಡಬೇಕಿದೆ.