ಹೈದರಾಬಾದ್: ಅಭಿಮಾನಿ ಸಾವಿಗೆ ಕಾರಣರಾದ ಹಿನ್ನಲೆಯಲ್ಲಿ ಅರೆಸ್ಟ್ ಆಗಿರುವ ನಟ ಅಲ್ಲು ಅರ್ಜುನ್ ಬಂಧನದ ಸಮಯದ ಬಗ್ಗೆ ಈಗ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ಲ್ಯಾನ್ ಮಾಡಿಕೊಂಡೇ ಪೊಲೀಸರು ಇಂದು ಬಂಧಿಸಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 4 ರಂದು ಪುಷ್ಪ 2 ರಿಲೀಸ್ ಆಗಿದ್ದ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಭೇಟಿಕೊಟ್ಟಿದ್ದರು. ಈ ವೇಳೆ ನಟನನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೂಕುನುಗ್ಗಲು ನಡೆಸಿದ್ದರು. ಈ ಸಂದರ್ಭದಲ್ಲಿ ಕಾಲ್ತುಳಿತದಿಂದಾಗಿ ರೇವತಿ ಎನ್ನುವ ಮಹಿಳೆ ಸಾವನ್ನಪ್ಪಿದ್ದರೆ ಆಕೆಯ ಪುತ್ರ ಗಂಭೀರ ಗಾಯಗೊಂಡಿದ್ದ.
ಘಟನೆ ಸಂಬಂಧ ಅಂದೇ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು. ಆದರೆ ಪೊಲೀಸರು ಬರೋಬ್ಬರಿ 9 ದಿನಗಳ ನಂತರ ಅಲ್ಲು ಅರ್ಜುನ್ ರನ್ನು ಬಂಧಿಸಿದ್ದಾರೆ. ಇದಕ್ಕೆ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ಪೊಲೀಸರು ಕಾರಣವನ್ನೂ ನೀಡಿದ್ದಾರೆ.
ಹಾಗಿದ್ದರೂ ಅಭಿಮಾನಿಗಳಿಗೆ ಮಾತ್ರ ಪೊಲೀಸರ ನಡೆ ಮೇಲೆ ಸಂಶಯ ಮೂಡಿದೆ. ಯಾಕೆಂದರೆ ನಾಳೆ ಎರಡನೇ ಶನಿವಾರವಾಗಿದ್ದು ಕೋರ್ಟ್ ರಜೆಯಿರುತ್ತದೆ. ಇಂದು ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಅಲ್ಲು ಅರ್ಜುನ್ ರನ್ನು ಕೋರ್ಟ್ ಗೆ ಹಾಜರುಪಡಿಸಬೇಕು. ಒಂದು ವೇಳೆ ಇಂದು ಅವರಿಗೆ ಕೋರ್ಟ್ ಜಾಮೀನು ನೀಡದೇ ಇದ್ದರೆ ಸೋಮವಾರದವರೆಗೂ ಅವರು ಜೈಲಿನಲ್ಲಿ ಕಳೆಯಬೇಕು. ಇದಕ್ಕಾಗಿಯೇ ಅವರನ್ನು ಇಂದು ಅರೆಸ್ಟ್ ಮಾಡಿಸಿದರಾ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.