ಮಗನ ಆರೋಗ್ಯದ ಅಪ್‌ಡೇಟ್‌ ನೀಡಿ ಸಿಂಗಾಪುರಕ್ಕೆ ದೌಡಾಯಿಸಿದ ಆಂಧ್ರ ಡಿಸಿಎಂ ಪವನ್‌ಕಲ್ಯಾಣ್‌

Sampriya

ಬುಧವಾರ, 9 ಏಪ್ರಿಲ್ 2025 (14:41 IST)
ಹೈದರಾಬಾದ್‌:  ಸಿಂಗಾಪುರದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡಿರುವ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ಟಾಲಿವುಡ್‌ ಸೂಪರ್‌ ಸ್ಟಾರ್‌ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್‌ ಚೇತರಿಸಿಕೊಳ್ಳುತ್ತಿದ್ದಾನೆ.

ಅಗ್ನಿ ಅವಘಡದಲ್ಲಿ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್‌ಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಗಾಪುರಕ್ಕೆ ತೆರಳುವ ಮುನ್ನ ಪುತ್ರನ ಆರೋಗ್ಯದ ಅಪ್‌ಡೇಟ್‌ ಅನ್ನು ಪವನ್ ಕಲ್ಯಾಣ್ ಮಾಧ್ಯಮಕ್ಕೆ ನೀಡಿದರು. ಸಹೋದರ ಮೆಗಾಸ್ಟಾರ್ ಚಿರಂಜೀವಿ ದಂಪತಿ ಜೊತೆ ಪವನ್ ಕಲ್ಯಾಣ್ ಸಿಂಗಾಪುರಕ್ಕೆ ತೆರಳಿದ್ದಾರೆ.  

ಮಾರ್ಕ್ ಶಂಕರ್  ಶಾಲೆಯ ಸಮ್ಮರ್ ಕ್ಯಾಂಪ್‌ಗೆ ಭಾಗಿಯಾಗಿದ್ದು, ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಪುತ್ರನೊಂದಿಗೆ ಇತರೆ ವಿದ್ಯಾರ್ಥಿಗಳು ಸಹ ಇದ್ದರು. ಮಗನ ಕೈ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಮಾರ್ಕ್ ಶಂಕರ್‌ಗೆ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ ಎಂದು ಪ್ರತಿಕ್ರಿಯಿಸಿದರು.

ಮಾರ್ಕ್ ಶಂಕರ್ನ ಶ್ವಾಸಕೋಶಕ್ಕೆ ಹಾನಿಯಾಗಿದ್ದು, ಬ್ರಾಂಕೋಸ್ಕೋಪಿ ಮಾಡಲಾಗಿದೆ. ಅವನ ದೇಹಕ್ಕೆ ಸಾಕಷ್ಟು ಹೊಗೆ ಸೇರಿದೆ. ಹಾಗಾಗಿ ಮಗನಿಗೆ ಚಿಕಿತ್ಸೆ ಮುಂದುವರೆದಿದೆ. ಈ ಬೆಂಕಿ ಅವಘಡದಲ್ಲಿ ನನ್ನ ಮಗನ ಮುಂದೆ ಕುಳಿತಿದ್ದ ಹುಡುಗನಿಗೆ ತೀವ್ರ ಗಾಯಗಳಾಗಿವೆ. ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಪವನ್ ಕಲ್ಯಾಣ್ ತಿಳಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ