ಬೆಂಗಳೂರು: ನಿನ್ನೆ ನಮ್ಮನ್ನಗಲಿದ ಅಭಿನಯ ಸರಸ್ವತಿ ಬಿ ಸರೋಜಾದೇವಿಗೆ ಇಂದು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.
ನಿನ್ನೆ ಮಲ್ಲೇಶ್ವರದ ತಮ್ಮ ಸ್ವ ಗೃಹದಲ್ಲಿ ಬಿ ಸರೋಜಾದೇವಿ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಬಳಿಕ ಮಲ್ಲೇಶ್ವರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸರೋಜಾದೇವಿ ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇಲ್ಲಿ ಸರೋಜಾದೇವಿಯವರ ತೋಟದಲ್ಲೇ ಅಂತಿಮ ಕ್ರಿಯೆ ನಡೆಸಲಾಗುತ್ತದೆ. ಸರೋಜಾದೇವಿ ಮೂಲತಃ ಒಕ್ಕಲಿಗ ಸಮುದಾಯದವರು. ಹೀಗಾಗಿ ಅವರ ಅಂತಿಮ ಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದೆ.
ಇದೇ ತೋಟದಲ್ಲಿ ಅವರ ತಾಯಿಯ ಸಮಾಧಿ ಪಕ್ಕದಲ್ಲೇ ತಾನೂ ಚಿರನಿದ್ರೆಗೆ ಜಾರಬೇಕೆನ್ನುವುದು ಅವರ ಕೊನೆಯಾಸೆಯಾಗಿತ್ತು. ಅದರಂತೆ ಅಮ್ಮನ ಸಮಾಧಿ ಪಕ್ಕದಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಸಾಕಷ್ಟು ಗಣ್ಯರು ಆಗಮಿಸುವ ನಿರೀಕ್ಷೆಯಿದೆ. ಇದಕ್ಕಾಗಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಸರೋಜಾದೇವಿ ಪಂಚಭಾಷಾ ನಟಿಯಾಗಿದ್ದು ಅವರ ಅಗಲುವಿಕೆಗೆ ಬಹುಭಾಷಾ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದರು.