ಭರಪೂರ ಮನರಂಜನೆ ತುಂಬಿಕೊಂಡ ಬಡ್ಡಿಮಗನ್ ಲೈಫ್!

ಗುರುವಾರ, 26 ಡಿಸೆಂಬರ್ 2019 (14:34 IST)
ಗ್ರೀನ್ ಚಿಲ್ಲಿ ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ನಿರ್ಮಾಣ ಮಾಡಿರುವ ಬಡ್ಡಿಮಗನ್ ಲೈಫು ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.

ಹಲವಾರು ವರ್ಷಗಳಿಂದ ಕಿರುಚಿತ್ರ ಮುಂತಾದ ಪ್ರಾಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಣೆ ಹಿಡಿದುಕೊಂಡಿದ್ದ ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರ ಸಾದಾ ಸೀದಾ ಸ್ವರೂಪದ್ದಂತೆ ಕಂಡರೂ ಅಸಾಧಾರಣವಾದ ಗುಣ ಲಕ್ಷಣಗಳನ್ನೊಳಗೊಂಡಿರುವ ಕಥೆಯನ್ನೊಳಗೊಂಡಿದೆಯಂತೆ. ಬಿಡುಗಡೆಯ ಕಡೇಯ ಘಳಿಗೆಯಲ್ಲಿ ಹಬ್ಬಿಕೊಂಡಿರುವ ಸಕಾರಾತ್ಮಕ ವಾತಾವರಣವೇ ಈ ಚಿತ್ರದ ಗೆಲುವಿನ ಲಕ್ಷಣದಂತೆ ಕಾಣಿಸುತ್ತಿದೆ.
 
ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿರುವ ಬಡ್ಡಿ ಮಗನ್ ಲೈಫು ಚಿತ್ರದ ಟ್ರೇಲರ್ ಭರ್ಜರಿಯಾಗಿಯೇ ಮೂಡಿ ಬಂದಿದೆ. ಇದು ಊರಿಗೆಲ್ಲ ಬಡ್ಡಿಗೆ ಕಾಸು ಕೊಟ್ಟು ರಕ್ತ ಹೀರುವ ಬಡ್ಡಿ ಸೀನಪ್ಪ ಎಂಬ ಪಾತ್ರದ ಸುತ್ತಾ ಘಟಿಸೋ ಮಜವಾದ ಕಥೆಯನ್ನೊಳಗೊಂಡಿರುವ ಚಿತ್ರ. ಅದರ ಅಸಲೀ ಸ್ವಾದ ಎಂಥಾದ್ದೆಂಬುದನ್ನು ಈಗ ಬಿಡುಗಡೆಯಾಗಿರುವ ಟ್ರೇಲರ್ ಜಾಹೀರು ಮಾಡಿದೆ. ಈ ಹೊತ್ತಿನಲ್ಲಿ ಬಡ್ಡಿಮಗನ್ ಲೈಫು ಬಗ್ಗೆ ಈ ಪಾಟಿ ಕುತೂಹಲಗಳು ಮೂಡಿಕೊಂಡಿವೆಯೆಂದರೆ ಅದರಲ್ಲಿ ಏನ್ ಚಂದನೋ ತಕ್ಕೋ ಹಾಡಿನ ಜೊತೆಗೆ ಟ್ರೇಲರ್ ಪಾತ್ರವೂ ಮಹತ್ವದ್ದಾಗಿದೆ.
 
ಇಲ್ಲಿ ಮೈಸೂರು ಭಾಗದಲ್ಲಿನ ಕಾಲ್ಪನಿಕ ಹಳ್ಳಿಯೊಂದರಲ್ಲಿ ಘಟಿಸುವ ಮಜವಾದ ಕಥೆಯನ್ನೊಳಗೊಂಡಿರುವ ಸನ್ನಿವೇಶಗಳಿದಾವೆ. ಅದೇನೇ ತೋರಿಸಿಕೊಂಡರೂ ಬಹುತೇಕರಿಗೆ ಪರರ ಬದುಕಿನ ಬಗ್ಗೆ ಭಾರೀ ಕುತೂಹಲವಿರುತ್ತದೆ. ಹಳ್ಳಿ ಸೀಮೆಯಲ್ಲಂತೂ ಇದರ ತೀವ್ರತೆ ತುಸು ಹೆಚ್ಚೇ. ಹಾಗೆ ಹಳ್ಳಿಗಳಲ್ಲಿ ಹೀಗೆ ಬೇರೆಯವರ ಬಗ್ಗೆ ಮಾತಾಡಿಕೊಳ್ಳೋದಕ್ಕೊಂದು ಬೇರೆಯದ್ದೇ ರೀತಿಯ ಮಜಾ ಇರುತ್ತೆ. ಅಂಥಾದ್ದೇ ಎಳೆಯನ್ನಿಟ್ಟುಕೊಂಡು ಈ ಚಿತ್ರವನ್ನು ಅಣಿಗೊಳಿಸಲಾಗಿದೆ. ಇದುವೇ ಬಡ್ಡಿಮಗನ್ ಲೈಫನ್ನು ಭರ್ಜರಿ ಮನರಂಜನೆಯಿಂದ ತುಂಬಿಸಿದೆ. ಅದೆಲ್ಲವೂ ಈ ವಾರವೇ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ