ಒಬ್ಬ ಆಟೋ ಚಾಲಕ, ಅವನ ಬದುಕಿನ ರೀತಿ ಜೊತೆಗೊಬ್ಬಳು ಹುಡುಗಿ, ಅವರ ಸುತ್ತ ನಡೆಯುವ ಘಟನೆಗಳನ್ನು ವಿಶಿಷ್ಠವಾದ ಚಿತ್ತಕತೆಯ ಮೂಲಕ ಹೇಳಹೊರಟಿರುವ ಸಿನಿಮಾ `ಕಪಟನಾಟಕ ಪಾತ್ರಧಾರಿ’. ಈ ಚಿತ್ರದ ನಿರ್ದೇಶಕ ಕ್ರಿಶ್ ಅವರು ಬರೆದಿಟ್ಟುಕೊಂಡಿದ್ದ ಕಥೆಗೆ ಯಾರನ್ನು ಹೀರೋ ಮಾಡುವುದು ಅಂತಾ ಯೋಚಿಸುತ್ತಿದ್ದ ಸಂದರ್ಭದಲ್ಲೇ ಹುಲಿರಾಯ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತಂತೆ.
ಅದರಲ್ಲಿ ಬಾಲು ಅವರ ದನಿ ಕೇಳಿಯೇ ಕ್ರಿಶ್ `ಇವರೇ ನಮ್ಮ ಚಿತ್ರದ ನಾಯಕನಟ’ ಅಂತಾ ಫಿಕ್ಸ್ ಆಗಿದ್ದರಂತೆ. ಅಂದುಕೊಂಡಂತೇ ಬಾಲು ಅವರಿಗೆ ಕಥೆ ಒಪ್ಪಿಸಿ ಸಿನಿಮಾ ಆರಂಭಿಸಿ ಈಗ ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಸದ್ಯ ಈ ಚಿತ್ರದ ಒಂದೊಂದೇ ಹಾಡುಗಳನ್ನು ಲೋಕಾರ್ಪಣೆ ಮಾಡಲು ಕ್ರಿಶ್ ಮತ್ತು ಚಿತ್ರತಂಡ ನಿರ್ಧರಿಸಿದ್ದಾರೆ. ಅದರಂತೆ `ಕಪಟನಾಟಕ ಪಾತ್ರಧಾರಿ’ ಚಿತ್ರದ ಒಂದು ಹಾಡು ಈಗ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
`ಕಪಟನಾಟಕ ಪಾತ್ರಧಾರಿ’ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನ ಸುತ್ತಮುತ್ತಲೇ ನೆರವೇರಿದೆ. ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಆದಿಲ್ ನದಾ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು, ಕ್ರಿಶ್, ವೇಣು ಹಸ್ರಾಳಿ, ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ಧಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಹಾಗೂ ಅನಿರುದ್ದ್ ಶಾಸ್ತ್ರಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಸಂಭಾಷಣೆ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ನವೀನ್ ವಾಸುದೇವ್, ಸುನೀಲ್ ಕುಲಕರ್ಣಿ ಸೇರಿದಂತೆ ಸಾಕಷ್ಟು ನಡರು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.