ಬೆಂಗಳೂರು: ಕಿಚ್ಚ ಸುದೀಪ್ ಗೆ ಈ ಬಿಗ್ ಬಾಸ್ ಕನ್ನಡ ಸೀಸನ್ ವಿಶೇಷವಾಗಿತ್ತು. ಇದೇ ಕೊನೆಯ ಬಾರಿಗೆ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡಿದ್ದರು. ಫೈನಲ್ ನೋಡಲು ಬಂದಿದ್ದ ತಂದೆಯ ಮುಂದೆ ಹೀಗೆ ನಡೆದುಕೊಂಡಿದ್ದಕ್ಕೆ ಅವರು ವೇದಿಕೆಯಲ್ಲೇ ಕ್ಷಮೆ ಯಾಚಿಸಿದ್ದಾರೆ.
ಕಿಚ್ಚ ಸುದೀಪ್ ಮುಂದಿನ ಸೀಸನ್ ನಿಂದ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಇದು ಅವರ ಕೊನೆಯ ಬಿಗ್ ಬಾಸ್ ಶೋ ಆಗಿತ್ತು. ಬಿಗ್ ಬಾಸ್ ಕನ್ನಡ ಶೋವನ್ನು ಸತತ 11 ಬಾರಿ ನಿರೂಪಿಸಿದ ಕಿಚ್ಚ ಈಗ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ಕೊನೆಯ ಶೋ ಎಂಬ ಕಾರಣಕ್ಕೆ ಅವರ ತಂದೆ ಅಪರೂಪಕ್ಕೆ ಮಗನನ್ನು ನೋಡಲು ಈ ಬಾರಿ ಫೈನಲ್ ಗೆ ಬಂದಿದ್ದರು. ಸಾಮಾನ್ಯವಾಗಿ ಕಿಚ್ಚ ಸುದೀಪ್ ತಂದೆ ಸಂಜೀವ್ ಸರೋವರ್ ಮಗನ ಸಿನಿಮಾ ಕಾರ್ಯಕ್ರಮಗಳಿಗೆ ಬರುವುದೇ ಅಪರೂಪ. ಆದರೆ ಈ ಬಾರಿ ಕೊನೆಯ ಬಾರಿಗೆ ಮಗ ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವುದನ್ನು ನೋಡಲು ಬಂದಿದ್ದರು.
ಮೊಮ್ಮಗಳು ಸಾನ್ವಿ ಜೊತೆ ಕೂತು ಫೈನಲ್ ಶೋವನ್ನು ಸುದೀಪ್ ತಂದೆ ಸಂಜೀವ್ ವೀಕ್ಷಣೆ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಸುದೀಪ್ ತಮ್ಮ ತಂದೆಗೆ ತುಂಬಾ ಗೌರವ ನೀಡುತ್ತಾರೆ. ನನ್ನ ಜೀವನದಲ್ಲಿ ಬಾಸ್ ಎಂದು ಇದ್ದರೆ ಅದು ನನ್ನ ತಂದೆ ಮಾತ್ರ ಎಂದು ಸುದೀಪ್ ಈಗಾಗಲೇ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ನಿರೂಪಣೆ ಗತ್ತು ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತೇ ಇರುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಸುದೀಪ್ ನನ್ನ ತಂದೆ ಯಾವತ್ತೂ ಬಿಗ್ ಬಾಸ್ ಶೋ ನೋಡಕ್ಕೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಬಂದಿದ್ದಾರೆ. ಇದುವರೆಗೆ ನಾನು ಅವರ ಎದುರು ಹೀಗೆಲ್ಲಾ ಪ್ಯಾಂಟ್ ಜೇಬಿನೊಳಗೆ ಕೈ ತೂರಿಸಿಕೊಂಡು ನಿಂತಿದ್ದೇ ಇಲ್ಲ. ಅಪ್ಪಾ ಸಾರಿ ಎಂದು ಸುದೀಪ್ ವೇದಿಕೆಯಲ್ಲೇ ಕ್ಷಮೆ ಕೇಳಿದ್ದಾರೆ. ಇದಕ್ಕೆ ನಗುತ್ತಾ ಸಂಜೀವ್ ಕೂಡಾ ತಲೆಯಾಡಿಸಿದ್ದಾರೆ. ಈ ಕ್ಷಣ ನಿನ್ನೆ ಫೈನಲ್ ಎಪಿಸೋಡ್ ನಲ್ಲಿ ವಿಶೇಷವಾಗಿತ್ತು.