ಬೆಂಗಳೂರು: ಸ್ಯಾಂಡಲ್ ವುಡ್ ಜೋಡಿ ವಸಿಷ್ಠ ಸಿಂಹ, ಹರಿಪ್ರಿಯಾ ಜೀವನಕ್ಕೆ ಮರಿ ಸಿಂಹನ ಆಗಮನವಾಗಿದೆ. ಅದೂ ವಿಶೇಷ ದಿನದಂದೇ. ಮಗುವಿನ ಆಗಮನದ ಗುಡ್ ನ್ಯೂಸ್ ದಂಪತಿ ಹಂಚಿಕೊಂಡಿದ್ದಾರೆ.
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ತಮಗೆ ಗಂಡು ಮಗುವಿನ ಜನನವಾದ ಖುಷಿಯ ವಿಚಾರವನ್ನು ನಿನ್ನೆ ರಾತ್ರಿ ಹಂಚಿಕೊಂಡಿದ್ದಾರೆ. ಜನವರಿ 26 ವಸಿಷ್ಠ ಸಿಂಹ ದಂಪತಿಗೆ ವಿಶೇಷವಾದ ದಿನ. ಇದೇ ದಿನ ಕಳೆದ ವರ್ಷ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಅದೂ ಮದುವೆಯಾದ ದಿನವೇ ಮಗುವಿನ ಆಗಮನವಾಗಿದ್ದು ವಿಶೇಷವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮರಿ ಸಿಂಹನ ಫೋಟೋ ಪ್ರಕಟಿಸಿರುವ ದಂಪತಿ, ಕೊನೆಗೂ ಅವನು ಬಂದಾಯ್ತು ಎಂದು ಬರೆದುಕೊಂಡಿದ್ದಾರೆ.
ಈ ಖುಷಿಯ ವಿಚಾರ ಹಂಚಿಕೊಳ್ಳುತ್ತಿದ್ದಂತೇ ದಂಪತಿಗೆ ಸಾಕಷ್ಟು ಜನ ಸಿನಿ ಸ್ನೇಹಿತು, ಅಭಿಮಾನಿಗಳು ಶುಭಾಶಯ ಸಂದೇಶಗಳನ್ನು ಕಳುಹಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹರಿಪ್ರಿಯಾ ಡೆಲಿವರಿಯಾಗಿದ್ದು ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.