ಮುಂಬೈ: ವಿವಾದಾತ್ಮಕ ಯುಟ್ಯೂಬರ್ ಮತ್ತು ಒಟಿಟಿ ಹಿಂದಿ ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ನಿವಾಸದ ಮೇಲೆ ಇಂದು ಬೆಳಗ್ಗೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಹರಿಯಾಣದ ಗುರುಗ್ರಾಮ್ನ ಸೆಕ್ಟರ್-56ನಲ್ಲಿರುವ ಎಲ್ವಿಶ್ ಮನೆ ಮೇಲೆ ಬೆಳಿಗ್ಗೆ 5.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು 25-30 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಮನೆಯ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ, ಎಸ್ಕೇಪ್ ಆಗಿದ್ದಾರೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಎಲ್ವಿಶ್ ಮನೆಯಲ್ಲಿ ಇರಲಿಲ್ಲವಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಫೈರಿಂಗ್ ಬಳಿಕ ಇಡೀ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ.
ಎಲ್ವಿಶ್ ಯಾದವ್ ತಮ್ಮ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾ ಆಕ್ಟಿವಿಟೀಸ್‌ಗಳಿಂದ ಫೇಮಸ್ ಆಗಿದ್ದಾರೆ. ಗುಂಡು ಹಾರಿಸಿದ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುರುಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎಲ್ವಿಶ್ ತಂದೆ ರಾಮಾವತಾರ್ ಯಾದವ್ ಪ್ರತಿಕ್ರಿಯಿಸಿ, ತಮ್ಮ ಮಗನಿಗೆ ಈ ಮುನ್ನ ಯಾವುದೇ ಬೆದರಿಕೆ ಬಂದಿಲ್ಲ. ಪೊಲೀಸರು ಇಲ್ಲಿದ್ದಾರೆ. ಗುಂಡು ಹಾರಿಸಿದಾಗ ನಾನು ಮಲಗಿದ್ದೆ. ಸುಮಾರು 25-30 ಗುಂಡು ಹಾರಿಸಲಾಗಿದೆ. ಸಿಸಿಟಿವಿಯಲ್ಲಿ ಬೈಕ್‌ನಲ್ಲಿ ಮೂವರು ಪುರುಷರು ಕಾಣಿಸಿಕೊಂಡಿದ್ದಾರೆ, ಆದರೆ ಇಬ್ಬರು ಗೇಟ್‌ನಲ್ಲಿ ನಿಂತು ಗುಂಡು ಹಾರಿಸುವುದು ಕಂಡಿದೆ ಎಂದು ತಿಳಿಸಿದರು.