ಏನಿದು ಭಾಗ 1 ಭಾಗ 2 ಅಂತಿದ್ದಾರಲ್ಲ ಅಂದ್ಕೊತಿದ್ದೀರಾ. ಪಾರ್ಟ್ 2 ತೆಗೆಯುವಂತದ್ದು ಸಿನಿಮಾದಲ್ಲಿ ಏನಿದೆ ಅಂತೀರಾ. ಹೌದು 'ತೋತಾಪುರಿ' ಸಿನಿಮಾ ಗಟ್ಟಿಯಾದ ಕಥೆ, ಆಳವಾದ ನಿರೂಪಣೆಯನ್ನ ಹೊಂದಿದೆ. ಹೀಗಾಗಿ ಒಂದೇ ಭಾಗದಲ್ಲಿ ಸಿನಿಮಾ ಮಾಡುವುದು ಕಷ್ಟಸಾಧ್ಯವಾದ್ದರಿಂದ ಎರಡು ಭಾಗಗಳಾಗಿ ಸಿನಿಮಾ ಮಾಡಲಾಗಿದೆ.
ಈಗಾಗಲೇ ಸಿನಿರಂಗದಲ್ಲಿ ಸೀಕ್ವೆನ್ಸ್ ಸಿನಿಮಾಗಳು ತೆರೆಗೆ ಬಂದಿವೆ. ಇದ್ರಲ್ಲಿ ಹೊಸತೇನಿದೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಆದ್ರೆ 'ತೋತಾಪುರಿ' ಬೇರೆ ಸಿನಿಮಾಗಳಿಗಿಂತ ಭಿನ್ನವಾಗಿದೆ. ಹೀಗಾಗಿ ವಿಶೇಷವಾಗಿದೆ. ಸೀಕ್ವೆನ್ಸ್ ಸಿನಿಮಾಗಳು ಹೇಗೆ ಅಂದ್ರೆ ಮೊದಲ ಭಾಗ ಹಿಟ್ ಆದ ನಂತರ ಎರಡನೇ ಭಾಗವನ್ನ ಮಾಡ್ತಾರೆ. 'ತೋತಾಪುರಿ' ಆಗಲ್ಲ. ಕಥೆಯೇ ಎರಡು ಭಾಗ ಮಾಡುವಷ್ಟಿದೆ. ಜೊತೆಗೆ ಎರಡು ಭಾಗಗಳ ಚಿತ್ರೀಕರಣ ಮುಗಿಸಿಕೊಂಡೆ ತೆರೆಗೆ ಬರಲಿದೆ. ಇದು ಭಾರತೀಯ ಸಿನಿರಂಗದಲ್ಲೇ ಇತಿಹಾಸ ಬರೆಯಲಿದೆ. ಇಷ್ಟು ವರ್ಷದಲ್ಲಿ ಯಾರು ಕೂಡ ಇಂತ ಸಾಹಸಕ್ಕೆ ಕೈ ಹಾಕಿರಲಿಲ್ಲ. ಮೊದಲ ಬಾರಿಗೆ 'ತೋತಾಪುರಿ' ತಂಡ ಇಂತ ಸಾಹಸ ಮಾಡುತ್ತಿದ್ದು, ದಾಖಲೆ ಬರೆಯುತ್ತಿದೆ.
ಜಗ್ಗೇಶ್ ಸಿನಿಮಾ ಅಂದ್ರೆ ಫುಲ್ ಮನರಂಜನೆ ಇದ್ದೆ ಇರುತ್ತೆ. ಜೊತೆಗೆ 'ನೀರ್ ದೋಸೆ' ಡೈರೆಕ್ಟರ್ ಬೇರೆ ಕೇಳ್ಬೇಕಾ. ಕಂಪ್ಲೀಟ್ ಪ್ಯಾಕೇಜ್ ಇದ್ದೆ ಇರುತ್ತೆ. ಹೀಗಾಗಿ ಮೊದಲ ಭಾಗ ರಿಲೀಸ್ ಆದ 100 ದಿನಗಳ ಅಂತರದಲ್ಲಿ ಎರಡನೇ ಭಾಗ ರಿಲೀಸ್ ಗೆ ತಯಾರಿ ಮಾಡಿಕೊಳ್ಳಲಾಗಿದೆ. ಮೊದಲ ಭಾಗದ ಕಾಮಿಡಿಯ ಸ್ವಾದ ಮನಸ್ಸಿನಿಂದ ಹೋಗುವ ಮುನ್ನ ಇನ್ನೊಂದು ಟೇಸ್ಟ್ ಹತ್ತಿಸೋ ಉದ್ದೇಶ ಚಿತ್ರತಂಡದ್ದು ಅಂತಾರೆ ನಿರ್ಮಾಪಕ ಕೆ.ಎ.ಸುರೇಶ್.
'ತೋತಾಪುರಿ'ಯ 'ತೊಟ್ಟು ಕೀಳ್ಬೇಕು' ಅಂತಾನೇ ಮೊದಲ ಭಾಗದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ತಂಡ, ಎರಡನೇ ಭಾಗದ ಚಿತ್ರೀಕರಣ ಆರಂಭಿಸಲು ಸಜ್ಜಾಗಿದ್ದು 'ತೊಟ್ಟು ಕಿತ್ತಾಯ್ತು' ಅನ್ನೋ ಟ್ಯಾಗ್ ಲೈನ್ ಛೇಂಜ್ ಮಾಡಿಕೊಂಡಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದು, ಎರಡು ಸಿನಿಮಾದಲ್ಲೂ ಎರೆಡೆರಡು ಹಾಡುಗಳಿವೆ. ಜಗ್ಗೇಶ್ ಜೊತೆ ಸುಮನ್ ರಂಗನಾಥ್ ನಟಿಸಿದ್ದು, ಉಳಿದಂತೆ ಅದಿತಿ ಪ್ರಭುದೇವ, ಡಾಲಿ ಧನಂಜಯ್ ಅಭಿನಯಿಸಿದ್ದಾರೆ. ಕೆ.ಎ. ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.