ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್ ಅವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದೆ.
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ 8ರ ವರೆಗೆ ನಡೆಯಲಿದೆ.
ಇನ್ನೂ ಈಚೆಗೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಚಲನಚಿತ್ರೋತ್ಸವ ಆಯೋಜನೆ ಕುರಿತು ಸಭೆ ನಡೆಯಿತು.
ಈ ವರ್ಷದ ಚಲನಚಿತ್ರೋತ್ಸವದ ಥೀಮ್ ʻಸರ್ವ ಜನಾಂಗದ ಶಾಂತಿಯ ತೋಟʼ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್ ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು. 2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ.
9ಕೋಟಿ ವೆಚ್ಚದಲ್ಲಿ ಚಲನಚಿತ್ರೋತ್ಸವನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಬೆಂಗಳೂರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನೆಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಳೆದಿದೆ.
ಚಲನಚಿತ್ರೋತ್ಸವದಲ್ಲಿ ಪ್ರತಿ ವರ್ಷ 60ಕ್ಕೂ ದೇಶಗಳಿಂದ ಬಂದ ಸುಮಾರು 200ಕ್ಕೂ ಅಧಿಕ ಚಲನಚಿತ್ರಗಳನ್ನು, 13 ಚಿತ್ರಮಂದಿರಗಳಲ್ಲಿ, ಸುಮಾರು 400 ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.
ಪ್ರತಿ ಆವೃತ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.