ಬೆಂಗಳೂರು: ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷಗಳು ಕಳೆದ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ.
ಸುದೀಪ್ ಚಿತ್ರರಂಗಕ್ಕೆ ಬಂದು 28 ವರ್ಷ ತುಂಬಿದ ಹಿನ್ನಲೆಯಲ್ಲಿ ಅಭಿಮಾನಿಗಳು ವಿಶೇಷ ಸಿಡಿಪಿ ಬಿಡುಗಡೆ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಬಾದ್ ಶಹಾ ಸಿನಿ ಜೀವನನ್ನು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಸುದೀಪ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಪತ್ರ ಬರೆದು ಧನ್ಯವಾದ ಸಲ್ಲಿಸಿದ್ದಾರೆ.
ಕಿಚ್ಚ ಸುದೀಪ್ ಪತ್ರದಲ್ಲೇನಿದೆ?
ಎಲ್ಲವೂ ನಿನ್ನೆ ಮೊನ್ನೆ ನಡೆದ ಹಾಗಿದೆ. ಕಂಠೀರವ ಸ್ಟುಡಿಯೋದ ಬ್ರಹ್ಮ ಫ್ಲೋರ್ ಗೆ ಕಾಲಿಟ್ಟ ಗಳಿಗೆ, ಅಂಬರೀಶ್ ಮಾಮ ಜೊತೆ ಕ್ಯಾಮರಾ ಎದುರಿಸಿದ ಕ್ಷಣ. ಆಗಲೇ 28 ವರ್ಷ ಕಳೆದುಹೋಗಿದೆ. ವಿನಮ್ರ ಭಾವನೆಯಿದೆ. ಈ ಬೆಲೆ ಕಟ್ಟಲಾಗದ ಉಡುಗೊರೆಗೆ ನಾನು ಪ್ರೀತಿ, ಗೌರವ ಮಾತ್ರ ಕೊಡಬಲ್ಲೆ. ಈ 28 ವರ್ಷ ನಿಮ್ಮನ್ನು ರಂಜಿಸುತ್ತಾ ಈ ಅದ್ಭುತ ಮನರಂಜನಾ ಕ್ಷೇತ್ರದಲ್ಲಿ ಕಳೆದು ಹೋಯಿತು. ಈ ಬೆಲೆಕಟ್ಟಲಾಗದ ಉಡುಗೊರೆಗೆ ದೇವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಬೆಂಬಲ ನೀಡಿದ ಹೆತ್ತವರು, ಕುಟುಂಬ, ತಂತ್ರಜ್ಞರು, ಬರಹಗಾರರು, ನಿರ್ಮಾಪಕರು, ಸಹ ಕಲಾವಿದರು, ಮಾಧ‍್ಯಮ, ಮನರಂಜನಾ ವಾಹಿನಿಗಳು, ವಿತರಕರು, ಪ್ರದರ್ಶಕರು ಸೇರಿದಂತೆ ನನ್ನ ಪ್ರಯಾಣದಲ್ಲಿ ಜೊತೆಯಾದ ಪ್ರತಿಯೊಬ್ಬರಿಗೂ ಧನ್ಯವಾದ. ಯಾವುದೇ ಷರತ್ತುಗಳಿಲ್ಲದೇ ನನ್ನ ಜೀವನಕ್ಕೆ ಬೆಂಬಲವಾಗಿ ನಿಂತ, ಕುಟುಂಬದವರಂತೇ ಜೊತೆಯಾಗಿರುವ ಅಭಿಮಾನಿಗಳನ್ನು ಮರೆಯಲಾಗದು. ಇದು ಏಳು ಬೀಳುಗಳ ಜೀವನವಾಗಿತ್ತು ಮತ್ತು ಇದನ್ನು ನಾನು ಎಂಜಾಯ್ ಮಾಡಿದ್ದೇನೆ. ನಾನು ಸೋಲಿಲ್ಲದ ಅಥವಾ ಪರ್ಫೆಕ್ಟ್ ಅಲ್ಲ. ಹಾಗಿದ್ದರೂ ನನಗೆ ಸಿಕ್ಕ ಅವಕಾಶದಲ್ಲಿ ನನಗೆ ಸಾಧ‍್ಯವಾದಷ್ಟು ಚೆನ್ನಾಗಿ ಮಾಡಲು ಪ್ರಯತ್ನಿಸಿದ್ದೇನೆ. ನಾನು ಇದ್ದ ಹಾಗೇ ನನ್ನನ್ನು ಸ್ವೀಕರಿಸಿದ ಎಲ್ಲರಿಗೂ ಈ ನಿಮ್ಮ ಪ್ರೀತಿಯ ಕಿಚ್ಚನ ಧನ್ಯವಾದಗಳು.