ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಆಂಡ್ ಗ್ಯಾಂಗ್ ಗೆ ಇಂದು ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗುತ್ತಿದೆ. ಆದರೆ ಇಂದೂ ಈ ಸೆಲೆಬ್ರಿಟಿ ಆರೋಪಿಗಳು ಕೋರ್ಟ್ ಗೆ ಹಾಜರಾಗುವುದು ಅನುಮಾನವಾಗಿದೆ.
ಇದು ಎರಡನೆಯ ಬಾರಿಗೆ ದರ್ಶನ್ ಆಂಡ್ ಗ್ಯಾಂಗ್ ಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ಅವಧಿ ನೀಡಿದೆ. ಈಗಾಗಲೇ ದರ್ಶನ್ ಮತ್ತು ಇತರರು ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದಾರೆ. ಆದರೆ ಈ ಆರೋಪಿಗಳಿಗೆ ಇಂದೂ ಜಾಮೀನು ಸಿಗುವುದು ಅನುಮಾನವಾಗಿದೆ.
ಈ ಬಗ್ಗೆ ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಕೂಡಾ ದರ್ಶನ್ ಗೆ ಸುಳಿವು ನೀಡಿದ್ದಾರೆ. ದರ್ಶನ್ ಈ ಪ್ರಕರಣದಲ್ಲಿ ಎ2 ಆರೋಪಿ, ಪವಿತ್ರಾ ಗೌಡ ಎ1 ಆರೋಪಿ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಆರೋಪಿಗಳ ಕೃತ್ಯದ ಬಗ್ಗೆ ಪೊಲೀಸರಿಗೆ ಪ್ರಬಲ ಸಾಕ್ಷ್ಯ ಸಿಕ್ಕಿದೆ. ಹೀಗಾಗಿ ಈ ಆರೋಪಿಗಳು ಇಂದೂ ಬಿಡುಗಡೆಯಾಗುವುದು ಬಹುತೇಕ ಸಾಧ್ಯತೆಯಿಲ್ಲ.
ಕಳೆದ ಬಾರಿ ಈ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್ ಬಳಿ ಕರೆತಂದರೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ, ಭದ್ರತೆಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಕೋರ್ಟ್ ಗೆ ನೇರವಾಗಿ ಕರೆತಂದಿರಲಿಲ್ಲ. ಇಂದೂ ಇದೇ ರೀತಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಯುವ ಸಾಧ್ಯತೆಯಿದೆ.