ಕೊನೆಗೂ ಬಗೆಹರಿಯಿತು 'ವಜ್ರುಮುನಿ' ಚಿತ್ರದ ಟೈಟಲ್ ವಿವಾದ. ಹೇಗೆ ಗೊತ್ತಾ?

ಶನಿವಾರ, 21 ಜುಲೈ 2018 (16:29 IST)
ಬೆಂಗಳೂರು : ‘ವಜ್ರುಮುನಿ' ಚಿತ್ರದ ಟೈಟಲ್ ನಲ್ಲಿರುವ ವ್ಯತ್ಯಾಸ ತಿಳಿಸುವುದರ ಮೂಲಕ ಚಿತ್ರದ ನಿರ್ದೇಶಕ ಭರತ್ ಚಕ್ರವರ್ತಿ ಅವರು ಈ ಟೈಟಲ್ ವಿವಾದವನ್ನು ಬಗೆಹರಿಸಿದ್ದಾರೆ.


ಭರತ್ ಚಕ್ರವರ್ತಿ ನಿರ್ದೇಶನದ ‘ವಜ್ರುಮುನಿ' ಚಿತ್ರದ ಟೈಟಲ್ ಬಗ್ಗೆ ಇತ್ತೀಚೆಗೆ ಕನ್ನಡದ ಖ್ಯಾತ ಖಳ ನಟ ವಜ್ರಮುನಿ ಕುಟುಂಬದವರು ದೂರು ನೀಡಿದ್ದರು. ವಜ್ರಮುನಿ ಹೆಸರಲ್ಲಿ ಸಿನಿಮಾ ಮಾಡುವ ಮೊದಲು ತಮ್ಮ ಅನುಮತಿ ಕೇಳಿಲ್ಲವೆಂದು ವಜ್ರಮುನಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು.


ಆದರೆ ಈ ಚಿತ್ರದ ಟೈಟಲ್ ಬಗ್ಗೆ ಚಿತ್ರದ ನಿರ್ದೇಶಕ ಭರತ್ ಚಕ್ರವರ್ತಿ ಅವರು ಸ್ಪಷ್ಟನೆ ನೀಡುವುದರ ಮೂಲಕ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,’ ಈ ಹೆಸರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ಕೊಟ್ಟಾಗಿದೆ. ಆದರೂ ವಜ್ರಮುನಿ ಹೆಸರು ಯಾಕೆ ಎಂದು ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ ಹೊರತು, ಎರಡೂ ಹೆಸರಿನಲ್ಲಿರೋ ಬದಲಾವಣೆಯನ್ನು ಮಾತ್ರ ಯಾರೂ ಗುರುತಿಸುತ್ತಿಲ್ಲ ಎಂದುಹೇಳಿದ್ದಾರೆ.


‘ವಜ್ರಮುನಿ ಅವರ ಹೆಸರಿಟ್ಟುಕೊಂಡು ಸಿನಿಮಾ ಮಾಡುತ್ತಿಲ್ಲ. ಅಥವಾ ಅವರ ಹೆಸರನ್ನು ನಾವು ಬಳಸಿಕೊಳ್ಳುತ್ತಿಲ್ಲ. ನಮ್ಮ ಚಿತ್ರದ ಹೆಸರು ವಜ್ರುಮುನಿ. ವಜ್ರುಮುನೇಶ್ವರ ಸ್ವಾಮಿಯ ಹೆಸರು. ಚಿತ್ರದ ನಾಯಕನ ಅಪ್ಪ, ವಜ್ರುಮುನೇಶ್ವರನ ಪರಮಭಕ್ತರು. ಆ ದೇವರ ಕೃಪೆಯಿಂದ ಜನಿಸುವ ಮಗನಿಗೆ, 'ವಜ್ರುಮುನಿ' ಎಂದು ನಾಮಕರಣ ಮಾಡುತ್ತಾರೆ. ಎಲ್ಲರೂ ವಜ್ರು ಅಂತ ಪ್ರೀತಿಯಿಂದ ಕರೆಯುತ್ತಾರೆ. ಹೀಗಾಗಿ ಚಿತ್ರಕ್ಕೆ ವಜ್ರುಮುನಿ ಎಂದು ಹೆಸರಿಟ್ಟಿದ್ದೇವೆ. ಒಂದು ವೇಳೆ ಚಿತ್ರದಲ್ಲಿ ಖಳ ನಟ ವಜ್ರಮುನಿ ಅವರ ಕುರಿತಾಗಿ ಏನಾದರು ವಿಷಯ ಇದ್ದರೆ ಖಂಡಿತ ನಾವು ಈ ಚಿತ್ರವನ್ನೇ ಬಿಡುಗಡೆ ಮಾಡಲ್ಲ' ಎಂದಿದ್ದಾರೆ ನಿರ್ದೇಶಕ ಭರತ್ ಚಕ್ರವರ್ತಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ