ಬೆಂಗಳೂರು: ಸಿನಿಮಾ ಟಿಕೆಟ್ ದರಕ್ಕೆ 200 ರೂ. ದರ ನಿಗದಿ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಇದೀಗ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ರಾಜ್ಯದಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾದಾಗ ಟಿಕೆಟ್ ದರ ಮಿತಿ ಮೀರುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಥಿಯೇಟರ್ ನತ್ತ ಬರುವುದಕ್ಕೂ ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಪ್ರೇಕ್ಷಕರ ಕೊರತೆಯಾಗುತ್ತಿದೆ ಎಂಬ ಆರೋಪಗಳಿತ್ತು.
ಈ ಹಿನ್ನಲೆಯಲ್ಲಿ ಸರ್ಕಾರ ಎರಡು ವಾರದ ಹಿಂದಷ್ಟೇ 200 ರೂ. ಟಿಕೆಟ್ ದರ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಸಾಮಾನ್ಯವಾಗಿ ಎಲ್ಲರೂ ಇದನ್ನು ಸ್ವಾಗತಿಸಿದ್ದರು. ಆದರೆ ಕನ್ನಡದ ಪ್ರಮುಖ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ಹೈಕೋರ್ಟ್ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಇದರಿಂದಾಗಿ ಸೆಪ್ಟೆಂಬರ್ 12 ರಿಂದ ಜಾರಿಯಾಗಿದ್ದ ಹೊಸ ನಿಯಮಕ್ಕೆ ಕೆಲವೇ ದಿನದಲ್ಲಿ ಬ್ರೇಕ್ ಬಿದ್ದಿದೆ. ಇದರ ಬಗ್ಗೆ ನಿನ್ನೆ ಕಾಂತಾರ ಚಾಪ್ಟರ್ ಪತ್ರಿಕಾಗೋಷ್ಠಿಯಲ್ಲಿ ಹೊಂಬಾಳೆ ಫಿಲಂಸ್ ಮುಖ್ಯಸ್ಥ ವಿಜಯ್ ಕಿರಗಂದೂರು ಬಳಿ ಪತ್ರಕರ್ತರು ಪ್ರಶ್ನಿಸಿದಾಗ ಅವರು ಸದ್ಯಕ್ಕೆ ಈ ಬಗ್ಗೆ ಮಾತನಾಡಲ್ಲ ಎಂದಿದ್ದರು.