ಬೆಂಗಳೂರು: ಕರ್ನಾಟಕದಲ್ಲಿ ಇಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದ 14 ಕ್ಷೇತ್ರಗಳಿಗೆ ನಡೆಯುತ್ತಿದೆ. ಸ್ಯಾಂಡಲ್‌ವುಡ್ ಮಂದಿ ಬೆಳಗ್ಗಿನಿಂದಲೇ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ನಟ ದರ್ಶನ್ ದಂಪತಿ, ರಾಜ್‌ಕುಮಾರ್ ಕುಟುಂಬ, ನಟಿ ರಾಗಿಣಿ ದ್ವಿವೇದಿ, ನಟ ಸುದೀಪ್, ನಟ ಗಣೇಶ್,ರಾಕಿಂಗ್ ಸ್ಟಾರ್ ಯಶ್ ಹಾಗೂ ಬಹುಭಾಷಾ ನಟ ಪ್ರಕಾಶ್ ರೈ ಸೇರಿದಂತೆ ಅನೇಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮತದಾನ ನಡೆದ ನಂತರ ವಿಡಿಯೋ ಸಂದೇಶ ಪೋಸ್ಟ್ ಮಾಡಿದ ನಟ ಪ್ರಕಾಶ್ ರಾಜ್ ಅವರು, ನಾನು ಬದಲಾವಣೆಗೆ ಮತ ನೀಡಿದ್ದೇನೆ. ನಾನು ದ್ವೇಷದ ವಿರುದ್ಧ ಮತ ನೀಡಿದ್ದೇನೆ. ಬದಲಾವಣೆಗಾಗಿ ಮತ ನೀಡಿದ್ದೇನೆ. ಸಂಸತ್ತಿನಲ್ಲಿ ನನ್ನ ದನಿಯಾಗಬಲ್ಲರೆಂದು ನಾನು ನಂಬುವ ಪ್ರತಿನಿಧಿಗೆ ನಾನು ಮತ ಹಾಕಿದ್ದೇನೆ. ದಯವಿಟ್ಟು ಹೋಗಿ ಮತದಾನ ಮಾಡಿ ಮತ್ತು ಬದಲಾವಣೆ ತನ್ನಿ. ಎಲ್ಲರನ್ನೂ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮತ ಚಲಾಯಿಸಿದ ನಂತರ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಪ್ರಕಾಶ್ ರಾಜ್ ಅವರು, ನನ್ನ ಮತ ನನ್ನ ಹಕ್ಕಿಗೆ ಸಂಬಂಧಿಸಿದೆ, ಯಾರು ನನ್ನನ್ನು ಪ್ರತಿನಿಧಿಸಬೇಕೆಂದು, ಯಾರು ಸಂಸತ್ತಿನಲ್ಲಿ ನನ್ನ ದನಿಯಾಗಬೇಕೆಂದು ಆರಿಸುವ ನನ್ನ ಅಧಿಕಾರವಿದು. ಕಳೆದೊಂದು ದಶಕದಲ್ಲಿ ನಾವು ನೋಡಿರುವ ದ್ವೇಷ ಮತ್ತು ವಿಭಜನಾತ್ಮಕ ರಾಜಕಾರಣದಿಂದಾಗಿ ನೀವು ನಂಬಿಕೆಯಿರಿಸಿರುವ ಅಭ್ಯರ್ಥಿಗೆ ಮತ ನೀಡುವುದು ಅಗತ್ಯ. ನಾನು ನಂಬಿಕೆ ಇರಿಸಿದ ಅಭ್ಯರ್ಥಿಗೆ ಹಾಗು ಅವರು ತಂದ ಪ್ರಣಾಳಿಕೆಗೆ ಮತ್ತು ಬದಲಾವಣೆಗೆ ಮತ ನೀಡಿದ್ದೇನೆ ಎಂದು ಹೇಳಿದ್ದಾರೆ.