ಕೊಚ್ಚಿ: ಸೂಪರ್ ಹಿಟ್ ಆಗಿದ್ದ ಮಲಯಾಳಂನ ಮಂಜುಮೇಲ್ ಬಾಯ್ಸ್ ಸಿನಿಮಾ ತಂಡದ ವಿರುದ್ಧ ಸಂಗೀತ ನಿರ್ದೇಶಕ ಇಳಯರಾಜ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಮಂಜುಮೇಲ್ ಬಾಯ್ಸ್ ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಮಲಯಾಳಂ ಸಿನಿಮಾದಲ್ಲಿ ದಾಖಲೆಯ 200 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ತಂಡದ ವಿರುದ್ಧ ಇದೀಗ ಸಂಗೀತ ದಿಗ್ಗಜ ಇಳಯರಾಜ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಇದಕ್ಕೆ ಕಾರಣ ಚಿತ್ರದಲ್ಲಿ ಬಳಸಿಕೊಂಡಿರುವ ಒಂದು ಹಾಡು. ಚಿತ್ರದಲ್ಲಿ ಕಣ್ಮಣಿ ಎನ್ನುವ ಹಾಡು ಬಳಸಲಾಗಿದೆ. ಈ ಹಾಡಿನ ಮೂಲ ಗುಣ ಸಿನಿಮಾದ ಇಳಯರಾಜ ಸಂಗೀತ ನಿರ್ದೇಶನದ ಕಣ್ಮಣಿ ಹಾಡಿನದ್ದಾಗಿದೆ. ಈ ಹಾಡು 1991 ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಇದೀಗ ಅದೇ ಹಾಡನ್ನು ಮಂಜುಮೇಲ್ ಬಾಯ್ಸ್ ನಲ್ಲಿ ಬಳಸಲಾಗಿದೆ.
ಆದರೆ ಇದಕ್ಕೆ ತಮ್ಮ ಅನುಮತಿ ಪಡೆದಿರಲಿಲ್ಲ ಎಂದು ಇಳಯರಾಜ ಸಿಟ್ಟಾಗಿದ್ದಾರೆ. ಇದೇ ಕಾರಣಕ್ಕೆ ಚಿತ್ರತಂಡದ ವಿರುದ್ಧ ನೋಟಿಸ್ ನೀಡಿದ್ದಾರೆ. ಈ ಹಾಡಿನ ಹಕ್ಕು ಸಂಪೂರ್ಣವಾಗಿ ನನ್ನದಾಗಿದೆ. ಇದನ್ನು ಸಿನಿಮಾದಲ್ಲಿ ಅಕ್ರಮವಾಗಿ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.