ತಮ್ಮ ಬಗ್ಗೆ ತಪ್ಪಾಗಿ ಬರೆದ ಪತ್ರಿಕೆ ವಿರುದ್ಧ ಜಗ್ಗೇಶ್ ಕೆಂಡಾಮಂಡಲ: ಲೈವ್ ಬಂದು ಹೇಳಿದ್ದೇನು?

ಮಂಗಳವಾರ, 23 ಫೆಬ್ರವರಿ 2021 (11:32 IST)
ಬೆಂಗಳೂರು: ತನ್ನ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ನಡೆದ ವಾಗ್ವಾದದ ಕುರಿತಂತೆ ತಪ್ಪಾಗಿ ಬರೆದ ಕನ್ನಡ ದಿನಪತ್ರಿಕೆಯೊಂದರ ವಿರುದ್ಧ ನವರಸನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಲೈವ್ ಬಂದು ಆಕ್ರೋಶ ಹೊರಹಾಕಿದ್ದಾರೆ.


ನಿಮಗೆ ಇದು ಬೇಕಿತ್ತಾ ಎಂಬ ಅಡಿಬರಹದಲ್ಲಿ ಲೈವ್ ವಿಡಿಯೋ ಹಾಕಿದ ಜಗ್ಗೇಶ್ ನಿನ್ನೆ ನಡೆದ ಘಟನೆ ಬಗ್ಗೆ ನಾನು ದರ್ಶನ್ ಅಭಿಮಾನಿಗಳಿಗೆ ಕಾಗೆ ಹಾರಿಸಿದೆ, ಎಸ್ಕೇಪ್ ಆದೆ ಎಂದೆಲ್ಲಾ ಸುಳ್ಳು ಸುದ್ದಿ ಹಾಕಿದ್ದೀರಿ. ನಿಮಗೆ ಹೀಗೆಲ್ಲಾ ಹಾಕಕ್ಕೆ ಹೇಗೆ ಮನಸ್ಸು ಬರುತ್ತೆ? ನಾನು ನಿನ್ನೆ ಓಡಿ ಹೋಗಿದ್ದೆನಾ? ಅವರ ಜೊತೆ ಮಾತನಾಡಿಲ್ವಾ? ನನ್ನಂಥ ಒಬ್ಬ ಹಿರಿಯ ನಟನ ಬಗ್ಗೆ ಅಪಮಾನ ಮಾಡುವ ಸುದ್ದಿ ಹಾಕಬೇಡಿ. ಈ ಥರ ದರಿದ್ರ ಲೇಖನ ಬರೆಯಕ್ಕೆ ನಾಚಿಕೆ ಆಗಲ್ವಾ? ಟಿಆರ್ ಪಿಗಾಗಿ ಕುತಂತ್ರ ಮಾಡ್ತಿದ್ದಿರಿ ಎಂದಾಯ್ತು. ನನ್ನ ಬಳಿಯೂ ಜನ ಇದ್ದಾರೆ. ಆದರೆ ನಾನು ಹಾಗೆ ಇನ್ನೊಬ್ಬರಿಗೆ ಘೇರಾವ್ ಹಾಕಕ್ಕೆಲ್ಲಾ ಪ್ರಚೋದನೆ ಕೊಡಲ್ಲ.

ನಾನು ಅಪ್ಪನಿಗೆ ಹುಟ್ಟಿದ ಮಗ. ಕನ್ನಡ ಅಂತ ಬದುಕಿದವನು. ನನಗೆ ಬುದ್ಧಿ ಕಲಿಸಬೇಕಾಗಿರುವುದು ನನ್ನ ರಾಘವೇಂದ್ರ ಸ್ವಾಮಿಗಳು, ನನ್ನ ಜನ, ನನ್ನನ್ನು ಪ್ರಶ್ನೆ ಮಾಡಲು ಹೆತ್ತ ಜನ ಇದ್ದಾರೆ. ಯಾವ ನಟನ ಅಭಿಮಾನಿಗಳೂ ಏನೂ ಮಾಡಕ್ಕಾಗಲ್ಲಾ? ನನ್ನ ಹೆಸರಿಗೆ ಮಸಿ ಬಳೆಯಲು ನಿಮಗೆ ಹೇಗೆ ಮನಸ್ಸು ಬರುತ್ತೆ? ನಾನು ಯಾರ ತಲೆಹಿಡಿದು ಬೆಳೆದವನಲ್ಲ. ನನ್ನ 40 ವರ್ಷದ ಅನುಭವಕ್ಕೆ ಅವಮಾನ ಮಾಡಿದಿರಿ. ನನಗೆ ಅವಮಾನ ಮಾಡುವುದು ಒಂದೇ ಕನ್ನಡಿಗರಿಗೆ ಅವಮಾನ ಮಾಡುವುದೂ ಒಂದೇ. ಮಾಧ‍್ಯಮ ಎಂದರೆ ನನಗೆ ಅಪಾರ ಗೌರವವಿದೆ. ದಯವಿಟ್ಟು ಇಂಥಾ ರೌಡಿಸಂ ಮಾಡಕ್ಕೆ ಹೋಗಬೇಡಿ’ ಎಂದು ಜಗ್ಗೇಶ್ ಆಕ್ರೋಶದಿಂದಲೇ ಲೈವ್ ನಲ್ಲಿ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ