ಸೆನ್ಸೇಷನ್ ಸೃಷ್ಟಿಸಿದ್ದ ‘ಜೊತೆ ಜೊತೆಯಲಿ’ ಪಯಣ ಇನ್ನು ಕೆಲವೇ ದಿನ

ಸೋಮವಾರ, 4 ಜುಲೈ 2022 (08:25 IST)
ಕೃಷ್ಣವೇಣಿ ಕೆ.

ಬೆಂಗಳೂರು: ಪ್ರಸಾರ ಆರಂಭವಾದ ಮೊದಲ ವಾರವೇ ಸೆನ್ಸೇಷನ್ ಸೃಷ್ಟಿಸಿದ್ದ ಜೊತೆ ಜೊತೆಯಲಿ ಧಾರವಾಹಿ ಪ್ರೇಕ್ಷಕರಿಗೆ ಇದು ತೀವ್ರ ಶಾಕಿಂಗ್ ಸುದ್ದಿ. ಕಿರುತೆರೆ ಧಾರವಾಹಿ ಪ್ರಪಂಚಕ್ಕೆ ಹೊಸ ಆಯಾಮ ತಂದುಕೊಟ್ಟ ಈ ಧಾರವಾಹಿ ಶೀಘ್ರವೇ ಅಂತ್ಯ
ಕಾಣುತ್ತಿದೆ.

ಜೊತೆ ಜೊತೆಯಲಿ ಧಾರವಾಹಿ ತಂಡದಿಂದಲೇ ಬಂದ ಖಚಿತ ಮಾಹಿತಿ ಪ್ರಕಾರ ಇನ್ನು ಕೆಲವು ಎಪಿಸೋಡ್ ಗಳು ಮಾತ್ರ ಧಾರವಾಹಿ ಪ್ರಸಾರ ಕಾಣಲಿದೆ. ಮೂಲ ಕತೆ ಮರಾಠಿಯದ್ದಾದರೂ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರೀಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಜೊತೆ ಜೊತೆಯಲಿ ಇದೀಗ ಕತೆ ಕ್ಲೈಮ್ಯಾಕ್ಸ್ ಹಂತ ಬಂದು ತಲುಪಿದ್ದು, ಕೆಲವೇ ಎಪಿಸೋಡ್ ಗಳಲ್ಲಿ ನಾಯಕ ಆರ್ಯವರ್ಧನ್ ನಿಜವಾಗಿಯೂ ರಾಜನಂದಿನಿ ಸಾವಿಗೆ ಕಾರಣರಾದರಾ? ನಿಜವಾಗಿಯೂ ಆರ್ಯ ಖಳನಾಯಕನಾ? ಒಂದು ವೇಳೆ ಹಿಂದೆ ಕೆಲವು ತಪ್ಪು ಕೆಲಸ ಮಾಡಿದ್ದರೆ ಅದರ ಹಿಂದಿನ ಉದ್ದೇಶವೇನು ಎಂಬುದು ವೀಕ್ಷಕರಿಗೆ ತಿಳಿಯಲಿದೆ.

ದಾಖಲೆಗಳನ್ನು ಸೃಷ್ಟಿಸಿದ್ದ ಧಾರವಾಹಿ: ಕೇವಲ ಕನ್ನಡ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಧಾರವಾಹಿಗಳ ಪೈಕಿ ಟಿಆರ್ ಪಿ ಲಿಸ್ಟ್ ನಲ್ಲಿ ಟಾಪ್ 5 ರೊಳಗೆ ಸ್ಥಾನ ಪಡೆದಿದ್ದ ಧಾರವಾಹಿ ಇದಾಗಿತ್ತು. ಆರಂಭಿಕ ವಾರದಲ್ಲೇ ದಾಖಲೆಯ ಟಿಆರ್ ಪಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದರ ಬಳಿಕ ತೆಲುಗು, ಮಲಯಾಳಂ ಭಾಷೆಗಳಿಗೂ ರಿಮೇಕ್ ಆಗಿದ್ದವು. ಕೇವಲ ಧಾರವಾಹಿ ಮಾತ್ರವಲ್ಲದೆ, ಅದರ ಹಾಡೂ ಇತ್ತೀಚೆಗಷ್ಟೇ ಯೂ ಟ್ಯೂಬ್ ನಲ್ಲಿ 3 ಕೋಟಿ ವೀಕ್ಷಣೆ ಕಂಡು ಕಿರುತೆರೆ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿತ್ತು. ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿದ್ದರಿಂದ ಮೈಸೂರಿನಲ್ಲಿ ಜನ ಸ್ವಯಂಪ್ರೇರಿತರಾಗಿ ಕಸ ವಿಲೇವಾರಿಯ ಮಹತ್ವ ಅರಿತುಕೊಂಡು ಅಳವಡಿಸಿಕೊಂಡಿದ್ದರು ಎಂಬುದನ್ನು ಸ್ವತಃ ನಗರಪಾಲಿಕೆಯೇ ಹೇಳಿತ್ತು. ಸತತವಾಗಿ ಟಿಆರ್ ಪಿ ಲಿಸ್ಟ್ ನಲ್ಲಿ ಗರಿಷ್ಠ ಸಮಯ ನಂ.1 ಸ್ಥಾನದಲ್ಲಿದ್ದ ಗರಿಮೆ, ಯೂ ಟ್ಯೂಬ್ ನಲ್ಲಿ ಹಲವು ಬಾರಿ ಟ್ರೆಂಡಿಂಗ್ ಲಿಸ್ಟ್ ನಲ್ಲಿದ್ದ ಧಾರವಾಹಿ ಇದಾಗಿತ್ತು. ಸದ್ಯಕ್ಕೆ 716 ಸಂಚಿಕೆಗಳನ್ನು ಕಂಡಿರುವ ಜೊತೆ ಜೊತೆಯಲಿ ಇಂದಿಗೂ ಟಿಆರ್ ಪಿ ಲಿಸ್ಟ್ ನಲ್ಲಿ 5 ನೇ ಸ್ಥಾನದಲ್ಲಿದೆ.

ನಟ ಅನಿರುದ್ಧ್ ಗೆ ಹೊಸ ಇಮೇಜ್ ತಂದುಕೊಟ್ಟ ಪಾತ್ರ: ಹಿರಿತೆರೆಯಲ್ಲಿ ಸಿಗದಂತಹ ಪಾತ್ರ, ಮಾನ್ಯತೆ ನಟ ಅನಿರುದ್ಧ್ ಜತ್ಕಾರ್ ಗೆ ಈ ಧಾರವಾಹಿ ನೀಡಿತ್ತು. ಅವರ ಅಭಿನಯದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಒರೆಗೆ ಹಚ್ಚಿದ್ದು ಆರ್ಯವರ್ಧನ್ ಪಾತ್ರದಲ್ಲಿ. ಹೆಸರು, ಕೀರ್ತಿ, ಸಂಪಾದನೆ ಎಲ್ಲಾ ವಿಚಾರದಲ್ಲೂ ಅನಿರುದ್ಧ್ ಗೆ ಇದು ಹೊಸ ಇಮೇಜ್ ತಂದುಕೊಟ್ಟ ಪಾತ್ರ.

ಗಮನ ಸೆಳೆದ ಮೇಘಾ ಶೆಟ್ಟಿ: ನಟನೆಗೆ ಹೊಸಬರಾದರೂ ಅನು ಸಿರಿಮನೆ ಪಾತ್ರದ ಮೂಲಕ ನಟಿ ಮೇಘಾ ಶೆಟ್ಟಿ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮನೆ ಮಾತಾದರು. ಇದೇ ಧಾರವಾಹಿಯಿಂದಾಗಿ ಇಂದು ಅವರ ಜನಪ್ರಿಯತೆ ಹೆಚ್ಚಿದ್ದು, ಸ್ಯಾಂಡಲ್ ವುಡ್ ನಲ್ಲೂ ಅವಕಾಶ ಪಡೆಯುತ್ತಿದ್ದಾರೆ.
ಅವರಲ್ಲದೇ ಶಾರದಮ್ಮನಾಗಿ ಕಾಣಿಸಿಕೊಂಡಿದ್ದ ಹಿರಿಯ ನಟಿ, ನಿರ್ದೇಶಕ ವಿಜಯಲಕ್ಷ್ಮಿ ಸಿಂಗ್, ಪುಷ್ಪ ಪಾತ್ರಧಾರಿ ಅಪೂರ್ವ, ಸುಬ್ರಮಣ್ಯ ಸಿರಿಮನೆ ಪಾತ್ರಧಾರಿ ಶಿವಾಜಿ ರಾವ್ ಜಾಧವ್, ಕೇಶವ್ ಝೇಂಡೆ ಪಾತ್ರಧಾರಿಯಾಗಿ ಬಿ.ಎಂ. ವೆಂಕಟೇಶ್, ಮೀರಾ ಹೆಗ್ಡೆ ಪಾತ್ರದಲ್ಲಿ ಮಾನಸಾ ಮನೋಹರ್ ಹೀಗೆ, ಪ್ರತೀ ಪಾತ್ರಕ್ಕೂ ಅವರದ್ದೇ ಆದ ಅಭಿಮಾನಿ ಬಳಗವೇ ಇದೆ. ಇದಲ್ಲದೆ ನಡುವೆ ಕೆಲವು ಎಪಿಸೋಡ್ ಗಳಲ್ಲಿ ಬಂದು ಹೋದ ವಿಜಯ್ ಸೂರ್ಯ, ಹಿರಿಯ ನಟಿ ಸುಧಾರಾಣಿ, ಹೊನ್ನವಳ್ಳಿ ಕೃಷ್ಣ, ನಟಿ ಸೋನು ಗೌಡ, ಜೈಜಗದೀಶ್  ಹೀಗೆ ಈ ಪಾತ್ರಗಳು ಧಾರವಾಹಿಯ ಸ್ಟಾರ್ ಇಮೇಜ್ ಹೆಚ್ಚಿಸಿದ್ದವು.

ನಿರ್ದೇಶಕ ಆರೂರ್ ಜಗದೀಶ್ ಇದುವರೆಗೆ ಗುಪ್ತಗಾಮಿನಿ, ಅಶ್ವಿನಿ ನಕ್ಷತ್ರದಂತಹ ಸೂಪರ್ ಹಿಟ್ ಧಾರವಾಹಿಗಳನ್ನು ಕೊಟ್ಟಿದ್ದಾರೆ. ಗುಪ್ತಗಾಮಿನಿ ಹೊರತುಪಡಿಸಿ ಅವರ ಯಾವುದೇ ಧಾರವಾಹಿಗಳು 1000 ಪ್ಲಸ್ ಎಪಿಸೋಡ್ ಕಂಡಿದ್ದಿಲ್ಲ. ಆದರೆ ಕಡಿಮೆ ಎಪಿಸೋಡ್ ಗಳಾದರೂ ತಮ್ಮ ಧಾರವಾಹಿಗಳ ಮೂಲಕ ಜನರನ್ನು ಮೋಡಿ ಮಾಡುವ ನಿರ್ದೇಶಕ ಅವರು. ಈ ಧಾರವಾಹಿ ಅವರಿಗೆ ಎಲ್ಲಕ್ಕಿಂತ ಹೆಚ್ಚು ಜನಪ್ರಿಯತೆ ಕೊಟ್ಟಿದೆ ಎನ್ನಬಹುದು. ಇದೀಗ ಈ ಜೊತೆ ಜೊತೆಯಲಿ ಪಯಣ ಕೊನೆಯಾಗುತ್ತಿರುವುದನ್ನು ವೀಕ್ಷಕರು ಭಾರವಾದ ಮನಸ್ಸಿನಿಂದ ಬೀಳ್ಕೊಡಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ