ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮೇಲಿನ ಆರೋಪ ಸಾಬೀತಾಗಿ ಅವರಿಗೆ ಜೈಲು ಶಿಕ್ಷೆಯಾದರೆ ಕೇವಲ ಅವರಿಗೆ ಮಾತ್ರವಲ್ಲ, ಅವರನ್ನು ನಂಬಿಕೊಂಡು ದುಡ್ಡು ಹಾಕಿರುವ ನಿರ್ಮಾಪಕರಿಗೂ ನಷ್ಟವಾಗಲಿದೆ.
ದರ್ಶನ್ ಕೈಯಲ್ಲಿ ಈಗ ಮೂರು ಬಿಗ್ ಬಜೆಟ್ ಪ್ರಾಜೆಕ್ಟ್ ಗಳಿವೆ. ಆ ಪೈಕಿ ಡೆವಿಲ್ ಸುಮಾರು 80% ಚಿತ್ರೀಕರಣ ಮುಗಿಸಿದೆ. ಒಂದು ವೇಳೆ ದರ್ಶನ್ ಗೆ ಜೈಲು ಶಿಕ್ಷೆಯಾದರೆ ಡೆವಿಲ್ ನಿರ್ಮಾಪಕರಿಗೆ ತೀರಾ ನಷ್ಟವಾಗಲಿದೆ. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿದ ನಿರ್ಮಾಪಕರು ಕಂಗಾಲಾಗಿದ್ದಾರೆ.
ಇಂತಹ ಸ್ಥಿತಿ ಎದುರಾದರೆ ನಿರ್ಮಾಪಕರ ಹಿತ ಕಾಪಾಡಲು ಏನು ಮಾಡಬಹುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಯೋಜನೆಯೊಂದನ್ನು ಹಾಕಿಕೊಂಡಿದೆ. ಒಂದು ವೇಳೆ ದರ್ಶನ್ ಮೇಲಿನ ಆರೋಪ ಸಾಬೀತಾಗಿ ಅವರಿಗೆ ಶಿಕ್ಷೆಯಾದರೆ ನಿರ್ಮಾಪಕರ ಹಿತದೃಷ್ಟಿಯಿಂದ ಕೆಲವು ದಿನ ಅವರಿಗೆ ಪರೋಲ್ ಮೇಲೆ ಬಿಡುಗಡೆ ಮಾಡಿ ಚಿತ್ರೀಕರಣಕ್ಕೆ ಅವಕಾಶ ಕೊಡಿ ಎಂದು ಘನ ನ್ಯಾಯಾಲಯವನ್ನು ಕೇಳುವುದಾಗಿ ಉಮೇಶ್ ಬಣಕಾರ್ ಹೇಳಿದ್ದಾರೆ.
ನ್ಯಾಯಾಲಯ ಅವಕಾಶ ಕೊಟ್ಟರೆ ಚಿತ್ರೀಕರಣ ಪೂರ್ತಿ ಮಾಡಬಹುದು, ಬಂಡವಾಳ ಹೂಡಿದ ನಿರ್ಮಾಪಕರಿಗೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬಹುದು. ಒಂದು ವೇಳೆ ಆರೋಪದಿಂದ ಮುಕ್ತರಾದರೆ ಈ ಸಮಸ್ಯೆಯೇ ಬರಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.