ಬೆಂಗಳೂರು: 16 ವರ್ಷಗಳ ಬಳಿಕ ನಟ ದರ್ಶನ್ ಅಭಿನಯದ ಸೂಪರ್ ಹಿಟ್ ನವಗ್ರಹ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಹತ್ಯೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ, ಮಧ್ಯಂತರ ಜಾಮೀನಿನಲ್ಲಿ ಹೊರಬಂದಿರುವ ದರ್ಶನ್ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ದರ್ಶನ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಸಿನಿಮಾ ರೀ ರಿಲೀಸ್ ಆಗುತ್ತಿರುವುದು ಖುಷಿ ನೀಡಿದೆ.
ಇದೀಗ ನಾಳೆ ದರ್ಶನ್ ಅಭಿನಯದ ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆ ಥಿಯೇಟರ್ ಮಾಲೀಕರು ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ನವಗ್ರಹ ಸಿನಿಮಾದ ಮೊದಲ ಶೋ ಬೆಳಗ್ಗೆ 7.30ಕ್ಕೆ ಆರಂಭವಾಗಲಿದೆ. ಅಡ್ವಾನ್ಸ್ ಬುಕಿಂಗ್ ಆರಂಭಿಸಿದ ಕೆಲವು ಗಂಟೆಗಳಲ್ಲೇ ಈ ಶೋನ ಎಲ್ಲಾ ಟಿಕೆಟ್ ಮಾರಾಟವಾಗಿದೆ.
ನವಗ್ರಹ ಮರು ಬಿಡುಗಡೆ ಹಿನ್ನೆಲೆ ಥಿಯೇಟ್ ಮಾಲೀಕರಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ಪ್ರೇಕ್ಷಕ ಮಹನೀಯರೇ ಮತ್ತು ನಮ್ಮ ನಿಮ್ಮೆಲ್ಲರ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೇ, ನಿಮ್ಮಲ್ಲಿ ನಾವು ಕೈ ಮುಗಿದು ಮನವಿ ಮಾಡುವುದು ಏನೆಂದರೆ, ನವಗ್ರಹ ಸಿನಿಮಾ ನೋಡಲು ಬಂದಾಗ ಯಾರೂ ಕೂಡ ಯಾರ ವಿರುದ್ಧವೂ ಘೋಷಣೆ ಕೂಗಬಾರದು, ಧಿಕ್ಕಾರ ಕೂಗುವುದನ್ನು ಮಾಡಬಾರದು. ಯಾವುದೇ ರೀತಿಯ ಗಲಾಟೆ ಮಾಡಬಾರದು. ಒಂದು ವೇಳೆ ಹೇಳಿದ್ದನ್ನು ಪಾಲಿಸದೇ ಇದ್ದರೆ ಇದರಿಂದ ತೊಂದರೆಯಾಗುವುದು ನಿರ್ಮಾಪಕರಿಗೆ, ಪ್ರಸನ್ನ ಚಿತ್ರಮಂದಿರಕ್ಕೆ ಮತ್ತು ದರ್ಶನ್ ಅವರಿಗೆ ಎನ್ನುವುದು ನೆನಪಿನಲ್ಲಿರಲಿ. ಆದ್ದರಿಂದ ಅಭಿಮಾನಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಸಿನಿಮಾ ನೋಡಿ ಆನಂದಿಸಬೇಕು. ಕರಿಯ ಸಿನಿಮಾ ಮರುಬಿಡುಗಡೆ ಸಂದರ್ಭದಲ್ಲಿ ಆದ ಘಟನೆ ಮತ್ತೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.