ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ವೇಳೆ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ.
ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಭಿಮಾನಿ ಸಂಘದ ನೆರವಿನಿಂದ ಕರೆಸಿದ್ದ ದರ್ಶನ್ ಆಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದರಿಂದ ಆತ ಸಾವಿಗೀಡಾಗಿದ್ದಾನೆ ಎಂಬುದು ಆರೋಪವಾಗಿದೆ.
ದರ್ಶನ್ ಗೆ ಈಗಾಗಲೇ ಅನಾರೋಗ್ಯದ ನೆಪದಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ. ಆದರೆ ಪವಿತ್ರಾ ಗೌಡಗೆ ಇದುವರೆಗೆ ಜಾಮೀನು ಸಿಕ್ಕಿಲ್ಲ. ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಂಬಿ ಎಣಿಸುತ್ತಿದ್ದಾರೆ. ಇದೀಗ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.
ಈ ವೇಳೆ ಪವಿತ್ರಾ ಪರ ವಾದ ಮಂಡಿಸಿದ ಟಾಮಿ ಸೆಬಾಸ್ಟಿಯನ್, ರೇಣುಕಾಸ್ವಾಮಿಗೆ ಪವಿತ್ರಾ ಒಂದು ಬಾರಿ ಮಾತ್ರ ಹೊಡೆದಿದ್ದಾಳೆ. ರೇಣುಕಾಸ್ವಾಮಿಯನ್ನು ಕಂಡ ಕೂಡಲೇ ಪವಿತ್ರಾ ಕಪಾಳಕ್ಕೆ ಒಂದು ಹೊಡೆದಿದ್ದಳು. ಇದು ಆರೋಪ ಪಟ್ಟಿಯಲ್ಲೂ ಉಲ್ಲೇಖವಾಗಿದೆ. ಬಳಿಕ ಚಪ್ಪಲಿಯಿಂದ ಹೊಡೆದಿದ್ದು ಪವಿತ್ರಾ ಗೌಡ ಅಲ್ಲ. ಪವಿತ್ರಾ ಚಪ್ಪಲಿ ತೆಗೆದುಕೊಂಡು ದರ್ಶನ್ ಹೊಡೆದಿದ್ದರು ಎಂದು ವಕೀಲರು ವಾದ ಮಂಡಿಸಿದ್ದಾರೆ.
ಕಪಾಳಕ್ಕೆ ಹೊಡೆದ ಬಳಿಕ ಪವಿತ್ರಾ ಮನೆಗೆ ಹೋಗಿದ್ದಾಳೆ. ಹೀಗಾಗಿ ರೇಣುಕಾಸ್ವಾಮಿ ಕೊಲೆಗೆ ಪವಿತ್ರಾ ಕಾರಣವಲ್ಲ ಎಂಬುದು ಅವರ ಪರ ವಕೀಲರ ವಾದವಾಗಿದೆ. ಈಗಾಗಲೇ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಮುಗಿದಿದೆ. ಇದೀಗ ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇದಾದ ಬಳಿಕ ತೀರ್ಪು ಪ್ರಕಟವಾಗಲಿದೆ.