ಬೆಂಗಳೂರು: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ದರ್ಶನ್ ಅಭಿಮಾನಿಗಳ ಪ್ರತಿಭಟನೆ ಮತ್ತಷ್ಟು ಜೋರಾಗಿದೆ. ಉಮಾಪತಿ ಏರಿಯಾದಲ್ಲೇ ದರ್ಶನ್ ಅಭಿಮಾನಿಗಳು ಬೈಕ್ ರಾಲಿ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ಅದಕ್ಕೀಗ ಪೊಲೀಸರಿಂದ ತಡೆಯಾಗಿದೆ.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಉಮಾಪತಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಆಗ ಇಲ್ಲಿ ದರ್ಶನ್ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಪ್ರಚಾರ ಮಾಡಿದ್ದರು. ಉಮಾಪತಿ ಚುನಾವಣೆಯಲ್ಲಿ ಸೋತಿದ್ದರು. ಇದೀಗ ಮತ್ತೆ ಉಮಾಪತಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ದರ್ಶನ್ ಅಭಿಮಾನಿಗಳು ಉಮಾಪತಿ ಕ್ಷೇತ್ರದಲ್ಲೇ ಬೈಕ್ ರಾಲಿ ಮಾಡಲು ಸಿದ್ಧತೆ ನಡೆಸಿದ್ದರು.
ಇತ್ತೀಚೆಗೆ ಕಾಟೇರ ಟೈಟಲ್ ನಾನು ಕೊಟ್ಟಿದ್ದು ಎಂದಿದ್ದ ಉಮಾಪತಿ ವಿರುದ್ಧ ದರ್ಶನ್ ವೇದಿಕೆಯಲ್ಲೇ ತಗಡು ಎನ್ನುವ ಶಬ್ಧ ಬಳಸಿ ಟೀಕಿಸಿದ್ದರು. ಇದಕ್ಕೆ ಉಮಾಪತಿ ಕೂಡಾ ತಿರುಗೇಟು ನೀಡಿದ್ದರು. ಬಳಿಕ ಉಮಾಪತಿ ಪರವಾಗಿ ಗೌಡತಿಯರ ಸೇನೆ ದರ್ಶನ್ ವಿರುದ್ಧ ದೂರು ನೀಡಿತ್ತು.
ಇದೇ ಕಾರಣಕ್ಕೆ ಉಮಾಪತಿ ಮತ್ತು ದರ್ಶನ್ ಅಭಿಮಾನಿಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಅಭಿಮಾನಿಗಳ ಜೊತೆ ದರ್ಶನ್ ಕೂಡಾ ಬೈಕ್ ರಾಲಿಯಲ್ಲಿ ಪಾಲ್ಗೊಳ‍್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಮೂಲಗಳ ಪ್ರಕಾರ ಈ ಬೈಕ್ ರಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಬೈಕ್ ರಾಲಿ ಬೇಡ, ಬೇಕಿದ್ದರೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಬಹುದು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.