ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ಜೊತೆಗಿನ ಜಟಾಪಟಿ ಹಿನ್ನಲೆಯಲ್ಲಿ ಅವರ ಬೆಂಬಲಿಗರ ಎದುರಾಗಬಹುದಾದ ಪ್ರತಿಭಟನೆ ತಡೆಯಲು ಸಂಸದೆ ಸುಮಲತಾ ಅಂಬರೀಶ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ರಾಕ್ ಲೈನ್ ವೆಂಕಟೇಶ್ ಅವರ ಮಹಾಲಕ್ಷ್ಮಿ ನಿವಾಸಕ್ಕೆ ಬ್ಯಾರಿಕೇಡ್ ಹಾಕಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಹಾಗಿದ್ದರೂ ಕುಮಾರಸ್ವಾಮಿ ಬೆಂಬಲಿಗರು ಬೆಳಿಗ್ಗೆಯೇ ರಾಕ್ ಲೈನ್ ನಿವಾಸಕ್ಕೆ ಮುತ್ತಿಗೆ ಹಾಕಿ ತಮ್ಮ ನಾಯಕನ ವಿರುದ್ಧ ಹೇಳಿಕೆ ನೀಡಿದ ಸ್ಯಾಂಡಲ್ ವುಡ್ ನಿರ್ಮಾಪಕನಿಗೆ ಧಿಕ್ಕಾರ ಹಾಕಿದ್ದಾರೆ.
ಇನ್ನು, ಸುಮಲತಾ ಅಂಬರೀಶ್ ನಿವಾಸಕ್ಕೂ ಬಿಗಿ ಭದ್ರತೆ ಒದಗಿಸಲಾಗಿದೆ. ರಾಕ್ ಲೈನ್ ನಿವಾಸದ ಎದುರು ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಜೆಪಿ ನಗರದಲ್ಲಿರುವ ಸುಮಲತಾ ನಿವಾಸಕ್ಕೂ ಭದ್ರತೆ ಒದಗಿಸಿದ್ದಾರೆ.