ಬೆಂಗಳೂರು: ಕರುನಾಡಿನ ಪ್ರೀತಿಯ ಅಪ್ಪು ಇಂದಿಗೆ ಅಧಿಕೃತವಾಗಿ ಕರ್ನಾಟಕ ರತ್ನನಾಗಿದ್ದಾರೆ. ಇಂದು ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಡೀ ಕಾರ್ಯಕ್ರಮ ಮಳೆಯಿಂದಾಗಿ ಅದ್ವಾನವಾಯಿತು ಎನ್ನುವುದು ಖೇದಕರ. ಕಾರ್ಯಕ್ರಮ ಸಂಜೆ 4 ಗಂಟೆ ಸುಮಾರಿಗೆ ಆರಂಭವಾಗಿದ್ದು, ಆಗಿನಿಂದ ಬಿಡದೇ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಕ್ ಹಿಡಿದು ನಿರೂಪಣೆಯ ಕೆಲಸವನ್ನೂ ಮಾಡಿದರು. ವೇದಿಕೆಯಲ್ಲಿದ್ದ ಗಣ್ಯರಿಗೆ ಛತ್ರಿ ಹಿಡಿದು ಮಳೆಯಿಂಧ ರಕ್ಷಿಸಲು ಯತ್ನಿಸಲಾಯಿತು. ಮಳೆಯಿಂದಾಗಿ 6.30 ರ ತನಕ ನಡೆಯಬೇಕಾಗಿದ್ದ ಕಾರ್ಯಕ್ರಮ 5.30 ಕ್ಕೇ ಕೊನೆಯಾಯಿತು.
ರಜನಿ-ಜ್ಯೂ.ಎನ್ ಟಿಆರ್ ಮಿಂಚು: ಇನ್ನು ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನೀಕಾಂತ್, ಜ್ಯೂ.ಎನ್ ಟಿಆರ್ ಆಗಮಿಸಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು. ಪುನೀತ್ ಜೊತೆಗಿನ ಒಡನಾಟ ಹಂಚಿಕೊಂಡಿದ್ದಲ್ಲದೆ ಇಬ್ಬರೂ ಸ್ಟಾರ್ ಗಳೂ ಕರ್ನಾಟಕ ಜನತೆಗೆ ರಾಜ್ಯೋತ್ಸವಕ್ಕೆ ಶುಭ ಕೋರಿದರು.
ಇನ್ ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಶಾಲು ಹೊದೆಸಿ ಸನ್ಮಾನಿಸಿದರು. ರಜನೀಕಾಂತ್, ಜ್ಯೂ.ಎನ್ ಟಿಆರ್, ಸಿಎಂ ಬೊಮ್ಮಾಯಿ ಜೊತೆಯಾಗಿ ಪುನೀತ್ ಪರವಾಗಿ ಅಶ್ವಿನಿಗೆ ಕರ್ನಾಟಕ ರತ್ನ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
ಕಾರ್ಯಕ್ರಮ ಆರಂಭದಲ್ಲಿ ವಿಜಯ್ ಪ್ರಕಾಶ್ ಮತ್ತು ತಂಡದವರ ಗಾಯನವಿತ್ತು. ಮಳೆಯಿದ್ದರೂ ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ನಿಂತಿದ್ದು ಸ್ಮರಣೀಯವಾಗಿತ್ತು. ಡಾ.ರಾಜ್ ಕುಟುಂಬದ ಎಲ್ಲಾ ಸದಸ್ಯರೂ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.