ಬೆಂಗಳೂರು: ಅನುಮತಿಯಿಲ್ಲದೆ ಹಾಡುಗಳನ್ನು ಬಳಸಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಾಪಿ ರೈಟ್ಸ್ ಉಲ್ಲಂಘನೆ ಆರೋಪ ಹೊತ್ತಿರುವ ರಕ್ಷಿತ್ ಶೆಟ್ಟಿ ಅವರಿಗೆ ಬಂಧನ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ರಕ್ಷಿತ್ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ರಕ್ಷಿತ್ ಶೆಟ್ಟಿ ಅವರ ನಿರ್ಮಾಣದ ಸಿನಿಮಾಗೆ ಅನುಮತಿಯಿಲ್ಲದೆ ಎರಡು ಹಾಡನ್ನು ಬಳಸಿದ್ದಕ್ಕೆ ಅವರ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಅದರಂತೆ ರಕ್ಷಿತ್ ಶೆಟ್ಟಿ ಮತ್ತು ಅವರ ನಿರ್ಮಾಣ ಸಂಸ್ಥೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ನಿರೀಕ್ಷಣಾ ಜಾಮೀನು ಕೋರಿ ರಕ್ಷಿತ್ ಶೆಟ್ಟಿ ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನ್ಯಾಯ ಎಲ್ಲಿದೆ ಸಾಂಗ್ ಕಾಪಿ ರೈಟ್ಸ್ ಉಲ್ಲಂಘನೆ ಆರೋಪ ಇವರ ಮೇಲಿದೆ. ಬ್ಯಾಚಲರ್ಸ್ ಪಾರ್ಟಿ ಸಿನಿಮಾಗಾಗಿ ಅನಧಿಕೃತವಾಗಿ ಆ ಹಾಡನ್ನು ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ ಬಳಕೆ ಮಾಡಿಕೊಂಡಿತ್ತು.
ಪರಮವಾ ಸ್ಟೂಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ಮೇಲೆ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ಕೂಡ ನೀಡಿದ್ದರು. ರಕ್ಷಿತ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಲಾಗಿದ್ದು, ವಿಚಾರಣೆಯನ್ನು ಜುಲೈ 24 ಕ್ಕೆ ಸೆಷನ್ಸ್ ಕೋರ್ಟ್ ಮುಂದೂಡಿದೆ.