ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರನ್ನು ಬಂಧಿಸದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದ ಬೆನ್ನಲ್ಲೇ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು, ಶಾಸಕರು – ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಹೈಕೋರ್ಟ್‌ನ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ, ಆದೇಶ ಹೊರಡಿಸಿದೆ
ಇನ್ನೂ ಕೋರ್ಟ್ ಭವಾನಿ ಅವರಿಗೆ ನೀಡಿದ ಷರತ್ತುಗಳು: 'ಕೂಡಲೇ ಭವಾನಿ ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಪೊಲೀಸರು ಅವರನ್ನು ಬಂಧಿಸಬಾರದು. ಸಂಜೆ 5 ಗಂಟೆಯ ಒಳಗೆ ವಿಚಾರಣೆ ಮುಗಿಸಿ ಅವರನ್ನು ಕಳುಹಿಸಿಕೊಡಬೇಕು. ಭವಾನಿ ಅವರು ಕೆ.ಆರ್.ನಗರ ಮತ್ತು ಹಾಸನ ಜಿಲ್ಲೆ ಪ್ರವೇಶಿಸಬಾರದು' ಎಂದು ಹೇಳಿದೆ.
ವಿಚಾರಣೆಯನ್ನು ಇದೇ 14 ಕ್ಕೆ ಮುಂದೂಡಲಾಗಿದೆ. ಭವಾನಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಗೂ ವಿಶೇಷ ಪ್ರಾಸಿಕ್ಯೂಟರ್ ಆದ ಹಿರಿಯ ವಕೀಲ ರವಿವರ್ಮ ಕುಮಾರ್ ಹಾಜರಿದ್ದರು.