ನಟನೆಗಾಗಿ ಬ್ರೇಕಪ್ ಮಾಡಿಕೊಂಡ ರಾಮಚಾರಿ ನಟ ರಿತ್ವಿಕ್ ಕೃಪಾಕರ್ ಹಿನ್ನಲೆ

ಸೋಮವಾರ, 10 ಜುಲೈ 2023 (08:50 IST)
Photo Courtesy: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಚಾರಿ ಧಾರವಾಹಿಯ ನಾಯಕ ರಿತ್ವಿಕ್ ಕೃಪಾಕರ್ ತೆರೆ ಮೇಲೆ ಆದರ್ಶ ಮಗನಾಗಿ, ಹೀರೋ ಆಗಿ ಜನರ ಗಮನ ಸೆಳೆದಿದ್ದಾರೆ.

ರಾಮಚಾರಿ ಧಾರವಾಹಿ ನೋಡುವವರಿಗೆ ಅವರ ಸ್ಪಷ್ಟ ಕನ್ನಡ, ಪುರೋಹಿತ ಮನೆತನದ ಪಾತ್ರ ಮಾಡುವ ಶೈಲಿ ಎಲ್ಲವೂ ಇಷ್ಟವಾಗಿರುತ್ತದೆ. ತೆರೆ ಮೇಲೆ ರಾಮಚಾರಿಯಾಗಿ ಮಿಂಚುವ ರಿತ್ವಿಕ್ ನಿಜ ಜೀವನದಲ್ಲಿ ಆ ಪಾತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾರಂತೆ. ಈ ಪಾತ್ರಕ್ಕಾಗಿ ಮಂತ್ರ ಹೇಳುವುದನ್ನು ಕಲಿತಿದ್ದಲ್ಲದೆ, ನಾನ್ ವೆಜ್ ಕೂಡಾ ಬಿಟ್ಟಿದ್ದರಂತೆ. ಅಷ್ಟೇ ಅಲ್ಲ, ರಾಮಚಾರಿ ಧಾರವಾಹಿಯಲ್ಲಿ ಬ್ಯುಸಿಯಾಗುತ್ತಿದ್ದಂತೇ ಸಮಯ ಕೊಡಲು ಆಗುತ್ತಿಲ್ಲವೆಂಬ ಕಾರಣಕ್ಕೆ ಪ್ರೀತಿಸಿದ ಹುಡುಗಿಯೊಂದಿಗೂ ಬ್ರೇಕಪ್ ಮಾಡಿಕೊಂಡಿದ್ದಾರೆ.

ರಿತ್ವಿಕ್ ಮೂಲತಃ ಮೈಸೂರಿನವರು. ಮಂಡ್ಯ ರಮೇಶ್‍ ಅವರ ನಟನ ರಂಗಶಾಲೆಯಲ್ಲಿ ತರಬೇತಿ ಪಡೆದು ನಾಟಕಗಳಲ್ಲಿ ಅಭಿನಯಿಸಿದ್ದರು. ತಂದೆ-ತಾಯಿಯ ಒತ್ತಾಯಕ್ಕೆ ರಂಗಭೂಮಿಗೆ ಬಂದವರು. ಬಳಿಕ ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡರು.

ತೆರೆ ಮೇಲೆ ಭರ್ಜರಿ ಫೈಟ್ ಮೂಲಕ ಗಮನ ಸೆಳೆಯುವ ರಿತ್ವಿಕ್ ಇದಕ್ಕಾಗಿ ವೃತ್ತಿಪರವಾಗಿ ತರಬೇತಿ ಪಡೆದಿದ್ದಾರೆ. ಮಾರ್ಷಿಯಲ್ ಆರ್ಟ್ಸ್, ಕಿಕ್ ಬಾಕ್ಸಿಂಗ್ ಅಭ್ಯಾಸ ಮಾಡಿದ್ದಾರೆ. ಇದಲ್ಲದೆ, ಸಂಗೀತದ ಮೇಲೆ ಒಲವಿದೆ. ರಾಮಚಾರಿ ಅವರು ಕೊಟ್ಟ ಮೊದಲ ಆಡಿಷನ್. ಅದರಲ್ಲಿಯೇ ಸೆಲೆಕ್ಟ್ ಆಗಿದ್ದಾರೆ. ನಟನೆ ಮಾತ್ರವಲ್ಲ, ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದು ತಮ್ಮದೇ ಫೌಂಡೇಷನ್ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಇದೀಗ ರಾಮಚಾರಿಯಾಗಿ ಮಿಂಚುತ್ತಿರುವ ರಿತ್ವಿಕ್ ಗೆ ಮುಂದೆ ಸಿನಿಮಾ ರಂಗದಲ್ಲೂ ಮಿಂಚುವ ಕನಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ