ನಿಮ್ಮ ಅಭೂತಪೂರ್ವ ಪ್ರತಿಕ್ರಿಯೆಗೆ ಧನ್ಯವಾದಗಳು. ಇದು 10 ಪ್ಲಸ್ 1 ವರ್ಷಕ್ಕೆ ಕಾಲಿಟ್ಟಿದ್ದೇನೆ. ಇದೀಗ ವಿದಾಯ ಹೇಳಲು ಸಮಯ ಬಂದಿದೆ. ಮುಂದೆ ನಾನು ಏನು ಮಾಡಬೇಕೆಂದಿದ್ದೇನೆ ಆ ಮಾರ್ಗದಲ್ಲಿ ನಡೆಯಬೇಕಿದೆ. ಬಿಗ್ ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್. ನನ್ನ ನಿರ್ಧಾರವನ್ನು ಕಲರ್ಸ್ ವಾಹಿನಿ ಮತ್ತು ವೀಕ್ಷಕರು ಗೌರವಿಸುತ್ತಾರೆ ಎಂದುಕೊಂಡಿದ್ದೇನೆ. ಈ ಸೀಸನ್ ನ್ನು ಅತ್ಯಂತ ಬೆಸ್ಟ್ ಆಗಿ ಮಾಡೋಣ ಎಂದಿದ್ದಾರೆ. ಸುದೀಪ್ ಅಧಿಕೃತವಾಗಿ ಇಂತಹದ್ದೊಂದು ಪ್ರಕಟಣೆ ನೀಡುತ್ತಿದ್ದಂತೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕಿಚ್ಚನಿಲ್ಲದೇ ಬಿಗ್ ಬಾಸ್ ಇಲ್ಲ. ಅವರಿಲ್ಲದ ಶೋ ನಾವು ನೋಡಲ್ಲ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಅಸಲಿಗೆ ಸುದೀಪ್ ಬಿಗ್ ಬಾಸ್ ಶೋ ಬಿಡುತ್ತಿರುವುದಕ್ಕೆ ಕಾರಣವೂ ಇದೆ. ಸುದೀಪ್ ಗೆ ಬಿಗ್ ಬಾಸ್ ನಿರೂಪಣೆ ಹೊರೆಯಾಗುತ್ತಿದೆ ಎಂದು ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲೇ ಹೇಳಿದ್ದರು. ಸುದೀಪ್ ಮುಂದಿನ ದಿನಗಳಲ್ಲಿ ವರ್ಷಕ್ಕೆ ಮಾಡುವ ಸಿನಿಮಾಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಇರಾದೆ ಹೊಂದಿದ್ದಾರೆ. ಆದರೆ ಇದಕ್ಕೆ ಬಿಗ್ ಬಾಸ್ ಅಡ್ಡಿಯಾಗುತ್ತಿದೆ. ಬಿಗ್ ಬಾಸ್ ಶೋ ಇದ್ದಾಗ ಅವರು ಸಿನಿಮಾಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಾರಕ್ಕೆ ನಾಲ್ಕು ದಿನ ಮಾತ್ರ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಬಹುದು. ವೀಕೆಂಡ್ ನಲ್ಲಿ ಎಲ್ಲೇ ಇದ್ದರೂ ಮತ್ತೆ ಬಿಬಿಕೆಗೆ ಮರಳಬೇಕಾಗುತ್ತದೆ ಎಂದು ಸ್ವತಃ ಸುದೀಪ್ ಇತ್ತೀಚೆಗೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಇದರ ಜೊತೆಗೆ ಅವರ ಮೆಚ್ಚಿನ ಸಿಸಿಎಲ್ ಕ್ರಿಕೆಟ್ ಟೂರ್ನಿಗಳಲ್ಲೂ ಭಾಗಿಯಾಗುತ್ತಾರೆ. ಇದೆಲ್ಲದರ ನಡುವೆ ಅವರಿಗೆ ಸಿನಿಮಾ ಮಾಡಲು ಪುರುಸೊತ್ತು ಸಿಗುತ್ತಿಲ್ಲ. ಇದೇ ಕಾರಣಕ್ಕೆ ಅವರು ಬಿಗ್ ಬಾಸ್ ಬಿಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.