ಶೀಘ್ರದಲ್ಲೇ ಬರಲಿದೆ ಶೀತಲ್ ಶೆಟ್ಟಿ ನಿರ್ದೇಶನದ ಮತ್ತೊಂದು ಕಿರುಚಿತ್ರ!

ಬುಧವಾರ, 11 ಡಿಸೆಂಬರ್ 2019 (15:42 IST)
ಶೀತಲ್ ಶೆಟ್ಟಿ ಕಾರು ಎಂಬ ಕಿರು ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆಂಬ ವಿಚಾರ ಈ ಹಿಂದೆಯೇ ಸುದ್ದಿಯಾಗಿತ್ತು. ಆ ನಂತರದ ಅವಧಿಯಲ್ಲಿ ಒಪ್ಪ ಓರಣವಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದ ಅವರು ಇದೀಗ ಕಾರು ಕಿರುಚಿತ್ರವನ್ನು ಬಿಡುಗಡೆಗೊಳಿಸಲು ತಯಾರಾಗಿದ್ದಾರೆ.
karu movie

ಎಳೇ ಮನಸಲ್ಲಿ ಪಡಿಮೂಡಿಕೊಳ್ಳುವ ಆಹ್ಲಾದಕರ ಕನಸು ಮತ್ತು ಕಲ್ಪನೆಗಳನ್ನು ಆಧರಿಸಿದ ನವಿರಾದ ಕಥೆಯನ್ನೊಳಗೊಂಡಿರುವ ಕಾರು ಈ ತಿಂಗಳ ಹದಿನೈದನೇ ತಾರೀಕಿನಂದು ಬಿಡುಗಡೆಯಾಗಲಿದೆ.
karu movie
ಈ ಹಿಂದೆ ಶೀತಲ್ ಶೆಟ್ಟಿ ಸಂಗಾತಿ ಅನ್ನೋ ಕಿರುಚಿತ್ರದಲ್ಲಿ ಸೂಕ್ಷ್ಮ ವಿಚಾರವನ್ನ ಮನಮುಟ್ಟುವಂತೆ ನಿರೂಪಿಸಿದ್ದರು. ಇದೀಗ ಅವರು ಕಾರು ಅನ್ನೋ ಕಿರು ಚಿತ್ರದ ಮೂಲಕ ಪ್ರತಿಯೊಬ್ಬರನ್ನೂ ಬಾಲ್ಯ ಕಾಲದಲ್ಲಿ ಕಾಡಿದ್ದ, ಈಗಲೂ ಕಾಡಬಹುದಾದ ಚೆಂದದ ಕಥೆಗೆ ದೃಷ್ಯ ರೂಪ ನೀಡಿದ್ದಾರಂತೆ.

ಇದನ್ನು ಪುಟ್ಟಿ ಅನ್ನೋ ಪುಟ್ಟ ಹುಡುಗಿಯ ಮೂಲಕ ದಾಖಲಿಸೋ ಪ್ರಯತ್ನವನ್ನ ಇಲ್ಲಿ ಮಾಡಲಾಗಿದೆ. ಆ ವಯೋಮಾನದಲ್ಲಿ ಯಾವುದೇ ಒಂದು ವಸ್ತು ಅದ್ಭುತ ಕಲ್ಪನೆಯಾಗಿ ಎಳೇ ಮನಸುಗಳನ್ನ ಕಾಡಲಾರಂಭಿಸುತ್ತೆ. ಹಾಗೆಯೇ ಇಲ್ಲಿನ ಪುಟ್ಟಿಯನ್ನು ಕಾರೆಂಬ ಮಾಯೆ ಕಾಡುತ್ತೆ. ಅದರ ಜೊತೆಗೇ ಮತ್ತೊಂದಷ್ಟು ಸೂಕ್ಷ್ಮ ಸಂಗತಿಗಳನ್ನ ಬೆರೆಸಿ ಕಾರು ಕಿರುಚಿತ್ರವನ್ನ ರೂಪಿಸಲಾಗಿದೆಯಂತೆ.
ಇದರ ಚಿತ್ರೀಕರಣ ಮಾಕೋನಹಳ್ಳಿ ಡ್ಯಾಂನ ಸುತ್ತಮುತ್ತಲ ರಮಣೀಯ ಪ್ರದೇಶಗಳಲ್ಲಿ ನಡೆಸಲಾಗಿದೆ. ಯೋಗೀಶ್ವರ್ ಛಾಯಾಗ್ರಹಣ, ಋತ್ವಿಕ್ ಸಂಕಲನ, ಅನಂತ್ ಕಾಮತ್ ಸಂಗೀತ ನಿರ್ದೇಶನ ಈ ಕಿರು ಚಿತ್ರಕ್ಕಿದೆ. ಶೀತಲ್ ಶೆಟ್ಟಿ ಟಿವಿ ವಾಹಿನಿಯ ನಿರೂಪಕಿಯಾಗಿದ್ದುಕೊಂಡು ಆ ನಂತರದಲ್ಲಿ ನಟನೆಯತ್ತ ಹೊರಳಿಕೊಂಡಿದ್ದರು.

ಇತ್ತೀಚೆಗೆ ಪತಿಬೇಕು ಡಾಟ್ ಕಾಮ್ ಎಂಬ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದರು. ಇದೆಲ್ಲವನ್ನು ನೋಡಿದವರು ಶೀತಲ್ ಇನ್ನು ಮುಂದೆ ನಟಿಯಾಗಿಯೇ ಮುಂದುವರೆಯುತ್ತಾರೆಂದುಕೊಂಡಿದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ಅವರು ಕಿರುಚಿತ್ರಗಳ ನಿರ್ದೇಶನದ ಮೂಲಕ ತಮ್ಮ ಆಸಕ್ತಿಯೇನೆಂಬುದನ್ನು ಸಾಬೀತುಪಡಿಸಿದ್ದಾರೆ. ಅದರ ಫಲವಾಗಿಯೇ ಕಾರು ಎಂಬ ಕಿರು ಚಿತ್ರ ಬಿಡುಗಡೆಗೆ ತಯಾರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ