ಬೆಂಗಳೂರು: ನಟಿ ಶ್ರುತಿ ಕೃಷ್ಣ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನಂ.1 ನಟಿ. ಅವರು ಸಿನಿಮಾದಲ್ಲಿದ್ದರೆ ಸಿನಿಮಾ ಸೂಪರ್ ಹಿಟ್ ಗ್ಯಾರಂಟಿ ಎನ್ನುವಂತಿತ್ತು ಅವರ ಚರೀಷ್ಮಾ. ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.
ಸಿನಿಮಾದಲ್ಲಿ ಕಣ್ಣೀರಿನ ಧಾರೆಯೇ ಹರಿಸುತ್ತಿದ್ದ ಶ್ರುತಿ ಕೃಷ್ಣ ತಮ್ಮ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ವೃತ್ತಿ ಬದುಕಿನ ಉತ್ತುಂಗದಲ್ಲಿದ್ದಾಗಲೇ ನಿರ್ದೇಶಕ ಎಸ್.ಮಹೇಂದರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಶ್ರುತಿ ನಂತರ ಹೆಣ್ಣು ಮಗುವಿನ ತಾಯಿಯಾದರು.
ಇದಾಗಿ ಕೆಲವೇ ಸಮಯದಲ್ಲಿ ವಿಚ್ಛೇದನಕ್ಕೊಳಗಾದರು. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಚ್ಛೇದನಕ್ಕೊಳಗಾದ ನಟಿಯರೆಂದರೆ ನೋಡುವ ರೀತಿಯೇ ಬೇರೆ. ಹಾಗಿದ್ದರೂ ಅದೆಲ್ಲವನ್ನೂ ಮೀರಿ ಬದುಕು ಕಟ್ಟಿಕೊಂಡರು. ಈ ನಡುವೆ ಚಕ್ರವರ್ತಿ ಚಂದ್ರಚೂಡ್ ಜೊತೆಗೆ ಮದುವೆಯಾಗಲು ಹೊರಟು ಅವರ ಮೊದಲನೇ ಪತ್ನಿಯಿಂದ ವಿಚ್ಛೇದನ ಪಡೆಯದೇ ಮದುವೆಯಾಗಲು ಹೊರಟಿದ್ದರು ಎಂಬ ಅಂಶ ಬೆಳಕಿಗೆ ಬಂದಾಗ ನೋವು ಅನುಭವಿಸಿ ತಾವೇ ಅವರ ಜೊತೆಗಿನ ಸಂಬಂಧ ಕಡಿದುಕೊಂಡರು.
ಆಗಲೂ ಶ್ರುತಿ ವಿವಾದದ ಕೇಂದ್ರ ಬಿಂದುವಾದರು. ಕೊನೆಗೆ ಮದುವೆಯ ಸಹವಾಸವೇ ಬೇಡವೆಂದು ತಮ್ಮ ತಂದೆ, ತಾಯಿಯಂದಿರು, ಮಗಳು ಎಂದು ತಮ್ಮದೇ ಪ್ರಪಂಚದಲ್ಲಿದ್ದು ಬಿಟ್ಟರು. ಇದರ ನಡುವೆ ಸಿನಿಮಾ, ರಿಯಾಲಿಟಿ ಶೋ, ರಾಜಕೀಯದಲ್ಲೂ ಬ್ಯುಸಿಯಾಗಿಬಿಟ್ಟರು.
ತಮ್ಮದೇ ಮನೆ ಕಟ್ಟಿಕೊಳ್ಳಬೇಕೆಂಬ ಬಹುದಿನದ ಕನಸನ್ನು ಇದೀಗಷ್ಟೇ ಶ್ರುತಿ ನನಸು ಮಾಡಿಕೊಂಡಿದ್ದಾರೆ. ಮೊನ್ನೆಯಷ್ಟೇ ಅವರ ಮನೆಯ ಗೃಹಪ್ರವೇಶ ಸಮಾರಂಭವೂ ನಡೆದಿದೆ. ಆ ಮೂಲಕ ಶ್ರುತಿ ಮತ್ತೊಂದು ಕನಸು ನನಸು ಮಾಡಿಕೊಂಡಿದ್ದಾರೆ.