ನವದೆಹಲಿ: ಇಷ್ಟು ದಿನ ಹಾರಾಡುತ್ತಿದ್ದ ಬಾಲಿವುಡ್ಡಿಗರನ್ನು ಸೌತ್ ಸಿನಿಮಾಗಳು ಸದ್ದಡಗಿಸುತ್ತಿವೆ ಎಂಬ ಮಾತು ಈಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಚಾರದಲ್ಲೂ ನಿಜವಾಗಿದೆ. ಕಳೆದ ಎರಡು ವರ್ಷದ ಟ್ರೆಂಡ್ ಗಮನಿಸಿದರೆ ಇದು ಸ್ಪಷ್ಟವಾಗುತ್ತಿದೆ.
ಈ ಹಿಂದೆಯೆಲ್ಲಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂದರೆ ಅದೊಂಥರಾ ಬಾಲಿವುಡ್ ಸಿನಿಮಾಗಳಿಗಷ್ಟೇ ಸೀಮಿತ ಎನ್ನುವಂತಿತ್ತು. ಅತ್ಯುತ್ತಮ ನಟ, ಸಿನಿಮಾ, ನಟಿ ಪ್ರಶಸ್ತಿಗಳೆಲ್ಲಾ ಬಾಲಿವುಡ್ ಸಿನಿಮಾಗಳ ಪಾಲಾಗುತ್ತಿತ್ತು. ಕೇವಲ ಸಣ್ಣಪುಟ್ಟ ಅವಾರ್ಡ್ ಗಳು ಮಾತ್ರ ದಕ್ಷಿಣ ಭಾರತದ ಸಿನಿಮಾಗಳದ್ದಾಗಿರುತ್ತಿತ್ತು.
ಆದರೆ ಕಳೆದ ಎರಡು ವರ್ಷಗಳಲ್ಲಿ ಆ ಟ್ರೆಂಡ್ ಬದಲಾಗಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸಿನಿಮಾ ರಂಗವನ್ನು ಆಳುತ್ತಿದೆ. ಬಾಲಿವುಡ್ ಸಿನಿಮಾ ಮಂದಿಯ ಕೊಬ್ಬು ಮುರಿದಿರುವ ಸೌತ್ ಸಿನಿಮಾಗಳು ಈಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲೂ ದೊಡ್ಡ ಪಾಲು ಪಡೆಯುತ್ತಿವೆ.
ಕಳೆದ ಬಾರಿ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದಾಗ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಪುಷ್ಪ ಸಿನಿಮಾಗೆ ಪ್ರಶಸ್ತಿ ಬಂದಿತ್ತು. ಕನ್ನಡದ 777 ಚಾರ್ಲಿ ಪ್ರಶಸ್ತಿ ಪಡೆದಿತ್ತು. ತೆಲುಗಿನ ಆರ್ ಆರ್ ಆರ್, ಉಪ್ಪೇನ, ತಮಿಳಿನ ಕಡಸೈ ವಿವಸಾಯಿ, ಮಲಯಾಳಂನ ಹೋಂ ಸಿನಿಮಾಗಳು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದವು.
ಈ ಬಾರಿಯೂ ಅದೇ ಮುಂದುವರಿದಿದೆ. ಬಹುತೇಕ ಸೌತ್ ಸಿನಿಮಾಗಳೇ ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಅತ್ಯುತ್ತಮ ಸಿನಿಮಾ, ನಟ, ನಟಿ ಮುಂತಾದ ಪ್ರಮುಖ ಪ್ರಶಸ್ತಿಗಳೆಲ್ಲಾ ಸೌತ್ ಸಿನಿಮಾಗಳ ಪಾಲಾಗಿದೆ. ಈ ಮೂಲಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲೂ ಈಗ ಸೌತ್ ಸಿನಿಮಾಗಳು ಬಾಲಿವುಡ್ ನ್ನು ಸೈಡ್ ಗೆ ಹಾಕಿ ಮೆರೆಯುತ್ತಿವೆ.