ಬೆಂಗಳೂರು: 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಕನ್ನಡದ ಕಾಂತಾರ ಅತ್ಯುತ್ತಮ ಮನರಂಜನಾ ವಿಭಾಗದಲ್ಲಿ ಮತ್ತು ಅತ್ಯುತ್ತಮ ನಟನೆಗಾಗಿ ರಿಷಬ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾದ ಕತೆ, ನಿರ್ದೇಶನ, ನಾಯಕ ನಟ ರಿಷಬ್ ಶೆಟ್ಟಿ. ಈ ಸಿನಿಮಾ ಆರಂಭದಲ್ಲಿ ಯಾರಿಗೂ ಅಷ್ಟೊಂದು ನಿರೀಕ್ಷೆಯೇ ಇರಲಿಲ್ಲ. ಕೇವಲ 18 ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ ಇದಾಗಿತ್ತು. ಅದೂ ತಮ್ಮೂರಿನ ಕಲಾವಿದರನ್ನೇ ಬಳಸಿಕೊಂಡು, ಸಿಕ್ಕ ಪ್ರಾಪರ್ಟಿಯಲ್ಲೇ ಸೆಟ್ ಮಾಡಿಕೊಂಡು ತಮ್ಮೂರಿನಲ್ಲೇ ರಿಷಬ್ ಚಿತ್ರೀಕರಣ ನಡೆಸಿದ್ದರು.
ಆದರೆ ಸಿನಿಮಾದ ಫಸ್ಟ್ ಶೋ ನೋಡಿದ ಬಳಿಕ ಎಲ್ಲರ ಮೈ ಝುಮ್ಮೆಂದಿತ್ತು. ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಅಭಿನಯ ನೋಡಿ ಈ ಬಾರಿ ನ್ಯಾಷನಲ್ ಅವಾರ್ಡ್ ಗ್ಯಾರಂಟಿ ಎಂದಿದ್ದರು. ಇದುವರೆಗೆ ಯಾರೂ ತೋರಿಸದ ದೈವ ಕೋಲವನ್ನು ಅಷ್ಟೇ ಶ್ರದ್ಧೆಯಿಂದ ತೋರಿಸಿದ್ದರು. ಇದರಿಂದ ಎಷ್ಟೋ ಜನ ದೈವ ಕೋಲದ ಬಗ್ಗೆ ತಿಳಿದುಕೊಳ್ಳುವಂತಾಯಿತು.
ರಿಷಬ್ ಪಟ್ಟ ಶ್ರಮಕ್ಕೆ ಇಂದು ಅವರಿಗೆ ತಕ್ಕ ಫಲ ಸಿಕ್ಕಿದೆ. ಎಷ್ಟೋ ವರ್ಷದ ನಂತರ ಕನ್ನಡಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಸಿಗುತ್ತಿದೆ. ರಿಷಬ್ ಶೆಟ್ಟಿಗೆ ಇದು ಎರಡನೇ ರಾಷ್ಟ್ರಪ್ರಶಸ್ತಿ. ಇದಕ್ಕೆ ಮೊದಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದರು.
ಇದೀಗ ಕಾಂತಾರ ಸಿನಿಮಾದಲ್ಲಿ ನಿರ್ದೇಶನಕ್ಕೆ ಪ್ರಶಸ್ತಿ ಬರದೇ ಇದ್ದರೂ ನಟನೆಗಾಗಿ ಪ್ರಶಸ್ತಿ ಬಂದಿದೆ. ಇದು ದೊಡ್ಡ ಸಾಧನೆಯೇ ಸರಿ. ಈ ಮೂಲಕ ಒಬ್ಬ ನಿರ್ದೇಶಕನಾಗಿ ಮತ್ತು ನಟನಾಗಿ ಅವರ ಪ್ರತಿಭೆಗೆ ತಕ್ಕ ಮನ್ನಣೆ ಸಿಕ್ಕಂತಾಗಿದೆ.