ಹುಬ್ಬಳ್ಳಿ: ನನ್ನ ಸಹೋದರಿ ಗೌರಿ ಕೊಲೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರ ಪತ್ನಿಗೂ ಅನ್ಯಾಯವಾಗಿದೆ. ಅವರಿಗೂ ನ್ಯಾಯ ಕೊಡಿಸುವ ಕೆಲಸ ಆಗಬೇಕು ನಟ, ನಿರ್ದೇಶ ಇಂದ್ರಜೀತ್ ಲಂಕೇಶ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯನ್ನು ಇಡೀ ಚಿತ್ರರಂಗ ಖಂಡಿಸುತ್ತದೆ. ಯಾರೇ ಕೊಲೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಇಂದ್ರಜೀತ್ ಲಂಕೇಶ್ ಆಗ್ರಹಿಸಿದರು.
ಕೊಲೆ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆ ಆರೋಪಿ ಯಾರು ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ ನಂತರ ಮೃತರ ಕುಟುಂಬದ ಪರವಾಗಿ ನಾನೂ ಪ್ರತಿಭಟನೆ ಮಾಡುತ್ತೇನೆ ಎಂದರು.
ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ದ್ವೇಷ ಹರಡುವ, ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಅಂತವರ ವಿರುದ್ದ ಸೈಬರ್ ಕ್ರೈಂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಂತಹ ಪ್ರಕರಣದಲ್ಲಿ ಭಾಗಿಯಾದವರು ನಟ, ರಾಜಕಾರಣಿ ಯಾರೇ ಆದರೂ ಅವರಿಗೆ ರಾಜಮರ್ಯಾದೆ ಕೊಡಬಾರದು. ರೇಣಾಕಾಸ್ವಾಮಿ ಪತ್ನಿ ಐದು ತಿಂಗಳ ಗರ್ಭಿಣಿಯಾಗಿದ್ದು, ಅವರನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇನೆ ಎಂದರು.