ಚೆನ್ನೈ: ಒಂದು ರಾತ್ರಿಗೆ 25 ಲಕ್ಷ ಕೊಟ್ಟು ಕರೆಯಿಸಿಕೊಂಡಿದ್ದೆವು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಐಡಿಎಂಕೆ ಉಚ್ಛಾಟಿತ ನಾಯಕ ಎ.ವಿ. ರಾಜು ವಿರುದ್ಧ ನಟಿ ತ್ರಿಶಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಎ.ವಿ. ರಾಜು ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬಾಯಿಗೆ ಬಂದಂತೆ ಅಸಂಬದ್ಧ ಮಾತನಾಡಿದ ರಾಜಕಾರಣಿ ವಿರುದ್ಧ ನಟಿ ತ್ರಿಶಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದ್ದು ಅದನ್ನು ಬಹಿರಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈಗಾಗಲೇ ಎ.ವಿ. ರಾಜು ನೀಡಿದ ಹೇಳಿಕೆಗಳನ್ನು ಮಾಧ‍್ಯಮಗಳು, ಸೋಷಿಯಲ್ ಮೀಡಿಯಾಗಳಿಂದ ಅಳಿಸಿ ಹಾಕಬೇಕು ಮತ್ತು ತ್ರಿಶಾಗೆ ಬಹಿರಂಗವಾಗಿ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದೇ ಹೋದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸವುದಾಗಿ ನೋಟಿಸ್ ನಲ್ಲಿ ಹೇಳಲಾಗಿದೆ. ನೋಟಿಸ್ ಸ್ವೀಕರಿಸಿದ 24 ಗಂಟೆಗಳಲ್ಲಿ ಕ್ಷಮೆ ಯಾಚಿಸಬೇಕು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.
ಆದರೆ ಇದಕ್ಕೂ ಮೊದಲೇ ಎ.ವಿ. ರಾಜು ಕ್ಷಮೆ ಯಾಚಿಸಿದ್ದಾರೆ. ತಮ್ಮ ಹೇಳಿಕೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಪ್ರತಿಕ್ರಿಯಿಸಿದ್ದ ಎ.ವಿ. ರಾಜು ನಾನು ಯಾರ ಹೆಸರನ್ನೂ ಹೇಳಿರಲಿಲ್ಲ. ಹಾಗಿದ್ದರೂ ತ್ರಿಶಾ ಅವರ ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಮೊದಲು ನಟ ಮನ್ಸೂರ್ ಅಲಿ ಖಾನ್ ಕೂಡಾ ತ್ರಿಶಾ ಬಗ್ಗೆ ಮಾನಹಾನಿಕಾರಕ ಹೇಳಿಕೆ ನೀಡಿದ್ದರು. ಬಳಿಕ ತ್ರಿಶಾ ವಿರುದ್ಧವೇ ಕೋರ್ಟ್ ಗೆ ಹೋಗಿ ಛೀಮಾರಿ ಹಾಕಿಸಿಕೊಂಡಿದ್ದರು. ಇದೀಗ ರಾಜಕಾರಣಿ ಎ.ವಿ. ರಾಜು ಸರದಿ.