Vaishnavi Gowda: ಅಳಿಯನ ಬಗ್ಗೆ ಫುಲ್ ಡೀಟೈಲ್ ಕೊಡ್ತೀನಿ, ಸುಳ್ಳು ಸುದ್ದಿ ಹಾಕ್ಬೇಡಿ: ವೈಷ್ಣವಿ ಗೌಡ ತಾಯಿ ಹೀಗೆ ಹೇಳಿದ್ಯಾಕೆ

Krishnaveni K

ಮಂಗಳವಾರ, 15 ಏಪ್ರಿಲ್ 2025 (11:46 IST)
Photo Credit: Instagram
ಬೆಂಗಳೂರು: ನನ್ನ ಅಳಿಯನ ಬಗ್ಗೆ ನಾವೇ ಫುಲ್ ಡೀಟೈಲ್ಸ್ ಕೊಡ್ತೀವಿ, ದಯವಿಟ್ಟು ಯಾರೂ ಸುಳ್ಳು ಸುದ್ದಿ ಹಾಕಬೇಡಿ.. ಹೀಗಂತ ನಟಿ ವೈಷ್ಣವಿ ಗೌಡ ತಾಯಿ ಭಾನು ರವಿಕುಮಾರ್ ಹೇಳಿದ್ದಾರೆ.

ವೈಷ್ಣವಿ ಗೌಡ, ಮನೆಯವರೇ ನೋಡಿ ನಿಶ್ಚಯಿಸಿದ ಅಕಾಯ್ ಜೊತೆ ಮದುವೆಯಾಗುತ್ತಿದ್ದಾರೆ. ತಮ್ಮ ಮದುವೆ ಬಗ್ಗೆ ವೈಷ್ಣವಿ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿ ತಮ್ಮ ಅಳಿಯನ ಬಗ್ಗೆ ವೈಷ್ಣವಿ ತಾಯಿ ಭಾನು ರವಿಕುಮಾರ್ ಮಾತನಾಡಿದ್ದಾರೆ.

ಇದಕ್ಕೆ ಮೊದಲು ವೈಷ್ಣವಿ ಮದುವೆ ಮಾತುಕತೆ ವಿದ್ಯಾಭರಣ್ ಎನ್ನುವವರ ಜೊತೆ ನಡೆದಿತ್ತು. ಆದರೆ ವಿದ್ಯಾಭರಣ್ ಜೊತೆ ಕಾರಣಾಂತರಗಳಿಂದ ಮದುವೆ ಮುರಿದುಬಿತ್ತು. ವಿದ್ಯಾಭರಣ್ ಬಗ್ಗೆ ಯೂ ಟ್ಯೂಬ್ ಗಳಲ್ಲಿ ಹಲವು ರೂಮರ್ ಗಳು ಹಬ್ಬಿತ್ತು.

ಇದೇ ಕಾರಣಕ್ಕೆ ಈಗ ವೈಷ್ಣವಿ ತಾಯಿ ಭಾನು ರವಿಕುಮಾರ್, ‘ಈಗ ನಡೆಯುತ್ತಿರುವುದು ನನ್ನ ಮಗಳ ನಿಶ್ಚಿತಾರ್ಥ. ನಮಗೆ ಒಳ್ಳೆಯ ಅಳಿಯನೇ ಸಿಕ್ಕಿದ್ದಾರೆ. ನಮ್ಮ ಅಳಿಯನ ಬಗ್ಗೆ ನಾವೇ ಫುಲ್ ಡೀಟೈಲ್ಸ್ ಕೊಡ್ತೀವಿ. ಅದನ್ನು ನೋಡಿಕೊಂಡು ಯೂ ಟ್ಯೂಬ್ ನಲ್ಲಿ ವಿಡಿಯೋ ಮಾಡುವವರು ಮಾಡಬಹುದು. ಯಾರೂ ಸುಳ್ಳು ಸುದ್ದಿ ಹಾಕಬೇಡಿ. ನಿಜ ವಿಚಾರವನ್ನು ನಾವೇ ಹೇಳ್ತೀವಿ’ ಎಂದಿದ್ದಾರೆ.

ಇನ್ನು, ವೈಷ್ಣವಿ ತಮ್ಮ ಹುಡುಗನ ಬಗ್ಗೆ ಯೂ ಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ. ಇಷ್ಟು ದಿನ ಎಲ್ಲರೂ ನಿಮ್ಮ ಮದುವೆ ಯಾವಾಗ ಅಂತ ಕೇಳ್ತಿದ್ದರು. ಈಗ ಅದಕ್ಕೆ ಸಮಯ ಬಂದಿದೆ. ನನ್ನ ಹುಡುಗ ಇವರೇ. ಕೆಲವರು ಏರ್ ಪೋರ್ಟ್ ನಲ್ಲಿ ಕೆಲಸ ಮಾಡ್ತಾರೆ ಎನ್ನುತ್ತಿದ್ದರು. ಆಗೆಲ್ಲಾ ಅವರಿಗೆ ನೋವಾಗುತ್ತಿತ್ತು. ಏರ್ ಪೋರ್ಟ್ ಅಲ್ಲ ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಾರೆ. ಪಾಪ, ನನಗಾಗಿ ಈಗ ಕಷ್ಟಪಟ್ಟು ಕನ್ನಡ ಕಲಿಯುತ್ತಿದ್ದಾರೆ. ಮುಂದೆ ನನ್ನ ಜೊತೆ ವ್ಲಾಗ್ ಮಾಡ್ತಾರೆ’ ಎಂದು ಗಂಡನ ಕಾಲೆಳೆದಿದ್ದಾರೆ. ಅಂದ ಹಾಗೆ ಅಕಾಯ್ ಗೆ ಕನ್ನಡ ಮಾತನಾಡಲು ಬರಲ್ಲ. ಮೂಲತಃ ಅವರು ಹಿಂದಿ ಭಾಷಿಕರು ಎನ್ನುವುದು ಈ ವಿಡಿಯೋದಿಂದ ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ