ಹಿರಿಯ ನಟಿ ಉಮಾಶ್ರೀ ಯಕ್ಷಗಾನ ಪಾತ್ರ ಮಾಡಿದ್ದೇಕೆ: ಕಾರಣ ಬಯಲು

Krishnaveni K

ಶನಿವಾರ, 18 ಜನವರಿ 2025 (10:16 IST)
ಹೊನ್ನಾವರ: ಹಿರಿಯ ನಟಿ ಉಮಾಶ್ರೀ ರಂಗಭೂಮಿ, ಹಿರಿತೆರೆ, ಕಿರುತೆರೆ ಬಳಿಕ ಈಗ ಯಕ್ಷಗಾನ ರಂಗದಲ್ಲೂ ತಮ್ಮ ಅಭಿನಯ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅಷ್ಟಕ್ಕೂ ಅವರು ಯಕ್ಷಗಾನದಲ್ಲಿ ಪಾತ್ರ ಮಾಡಿದ್ದೇಕೆ ಕಾರಣ ಬಯಲಾಗಿದೆ.

ಹೊನ್ನಾವರಣದಲ್ಲಿ ನಿನ್ನೆ ನಡೆದ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರಸಂಗದಲ್ಲಿ ಉಮಾಶ್ರೀ ಮಂಥರೆ ಪಾತ್ರ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಅಭಿನಯಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣವೂ ಇದೆ.

ಯಕ್ಷಗಾನದಲ್ಲಿ ದಿಗ್ಗಜ ಕಲಾವಿದರ ಸಾಲಿನಲ್ಲಿ ರಾಮಚಂದ್ರ ಚಿಟ್ಟಾಣಿಯವರೂ ಒಬ್ಬರು. ದಿವಂಗತ ರಾಮಚಂದ್ರ ಚಿಟ್ಟಾಣಿಯವರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಪಾತ್ರ ಮಾಡಬೇಕೆಂದಿತ್ತಂತೆ. ಇದನ್ನು ಅವರು ತಾವು ಬದುಕಿದ್ದಾಗಲೇ ಕೇಳಿದ್ದರಂತೆ. ಮಂಥರೆ ಪಾತ್ರ ಮಾಡುವಂತೆ ಕೇಳಿದಾಗ ಉಮಾಶ್ರೀ ನನಗೆ ಯಕ್ಷಗಾನ ಅನುಭವವಿಲ್ಲ. ಹೀಗಾಗಿ ಹೇಗೆ ಮಾಡಲಿ ಎಂದು ಹಿಂದೇಟು ಹಾಕಿದ್ದರಂತೆ. ಇತ್ತೀಚೆಗೆ ಅವರ ಮಗ ಸುಬ್ರಹ್ಮಣ್ಯ ಚಿಟ್ಟಾಣಿಯವರು ಮಂಥರೆಯ ಪಾತ್ರ ಮಾಡಲು ಕೋರಿಕೊಂಡಾಗ ರಾಮಚಂದ್ರ ಚಿಟ್ಟಾಣಿಯವರ ಮೇಲಿನ ಗೌರವದಿಂದ ಪಾತ್ರ ಮಾಡಲು ಒಪ್ಪಿಕೊಂಡರಂತೆ. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಪಾತ್ರ ಮಾಡಲು ಒಪ್ಪಿಕೊಂಡೆ ಎಂದಿದ್ದಾರೆ. ಇನ್ನು, ಯಕ್ಷಗಾನದಲ್ಲಿ ಪಾತ್ರ ಮಾಡುವುದಕ್ಕಾಗಿ ಉಮಾಶ್ರೀ ಮೊದಲೇ ಹೊನ್ನಾವರಕ್ಕೆ ತೆರಳಿ ಮೇಳದವರೊಂದಿಗೆ ಎರಡು ದಿನಗಳ ತಾಲೀಮು ಕೂಡಾ ನಡೆಸಿ ಬಂದಿದ್ದರು. ನಿನ್ನೆ ರಾತ್ರಿ ಯಕ್ಷಗಾನ ರಂಗದಲ್ಲಿ ಮಂಥರೆಯ ಪಾತ್ರದಲ್ಲಿ ಮಿಂಚಿದ ಉಮಾಶ್ರೀ ತಮ್ಮೊಳಗಿನ ಮತ್ತೊಂದು ಪ್ರತಿಭೆಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ