ಬೆಂಗಳೂರು: ₹ 12.86 ಕೋಟಿ ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿ ಮಾರ್ಚ್ 3 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕನ್ನಡ ಚಲನಚಿತ್ರ ನಟಿ ರನ್ಯಾ ರಾವ್ ಅವರು ಕಸ್ಟಮ್ಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಭಾರೀ ಸ್ಕೆಚ್ ಹಾಕಿಕೊಂಡಿದ್ದರು.
ಬ್ಯಾಗ್‌ನಲ್ಲಿ ಇಟ್ಟರೆ ಚಿನ್ನಪತ್ತೆಯಾಗುತ್ತದೆಂದು 14ಕೆಜಿ ಚಿನ್ನದ ತುಂಡುಗಳನ್ನು ಪೀಸ್ ಪೀಸ್ ಮಾಡಿ ತನ್ನ ತೊಡೆಗೆ ಟೇಪ್‌ನಿಂದ ಕಟ್ಟಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕದ ಹಿರಿಯ ಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿಯ ಮಲ ಮಗಳಾಗಿರುವ ರನ್ಯಾ ರಾವ್ (33) ಅವರು ವಿಮಾನ ನಿಲ್ದಾಣದಲ್ಲಿ ಚಿನ್ನಾಭರಣದೊಂದಿಗೆ ಆಗಮಿಸಿರುವ ಬಗ್ಗೆ ಮಾಹಿತಿ ಪಡೆದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.
ರಾವ್ ಧರಿಸಿದ್ದ ಜಾಕೆಟ್‌ನಲ್ಲಿ ಚಿನ್ನಾಭರಣ ಕಳ್ಳಸಾಗಣೆ ಮಾಡಲಾಗಿದೆ ಎಂಬ ಊಹಾಪೋಹವಿದ್ದರೂ, ದೈಹಿಕ ತಪಾಸಣೆಯ ವೇಳೆ ನಟಿಯ ಮೇಲೆ ಚಿನ್ನ ಪತ್ತೆಯಾಗಿದೆ ಎಂದು DRI ತಿಳಿಸಿದೆ.
ಮಾರ್ಚ್ 3 ರಂದು ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದ ರಾವ್ ಅವರ ಬಂಧನದ ಕುರಿತು ಡಿಆರ್‌ಐ ಅಧಿಕೃತ ಹೇಳಿಕೆಯಲ್ಲಿ, ತನಿಖೆ ವೇಳೆ ನಟಿಯಲ್ಲಿ 14.2 ಕೆಜಿ ತೂಕದ ಪೀಸ್ ಪೀಸ್ ಚಿನ್ನದ ತುಂಡುಗಳು ಪತ್ತೆಯಾಗಿದೆ.
ರಾವ್ ತನ್ನ ತೊಡೆಯ ಮೇಲೆ ಟೇಪ್ ಮತ್ತು ಕ್ರೇಪ್ ಬ್ಯಾಂಡೇಜ್‌ಗಳಿಂದ 1 ಕೆಜಿ ತೂಕದ 14 ಚಿನ್ನದ ಬಾರ್‌ಗಳನ್ನು ಕಟ್ಟಿದ್ದರು ಮತ್ತು ನಂತರ ರವಾನೆಯನ್ನು ಮರೆಮಾಡಲು ಪ್ಯಾಂಟ್ ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೂ ಚಿನ್ನವನ್ನು ಕಳ್ಳಸಾಗಣೆ ಮಾಡಲು ಇದೇ ರೀತಿಯ ಪ್ಲ್ಯಾನ್ ಅನ್ನು ಬಳಸಿದ್ದರು ಎನ್ನಲಾಗಿದೆ.