ಬೆಂಗಳೂರು: ಮೇಕೆದಾಟು ಹೋರಾಟಕ್ಕೆ ಬಾರದ ಸ್ಯಾಂಡಲ್ ವುಡ್ ನಟರ ನಟ್ಟು ಬೋಲ್ಟ್ ಸರಿ ಮಾಡ್ತೀನಿ ಎಂದಿದ್ದ ಡಿಕೆ ಶಿವಕುಮಾರ್ ಹೇಳಿಕೆಯನ್ನು ಇಂದು ನಟಿ ರಮ್ಯಾ ಒಂದೆಡೆ ಖಂಡಿಸಿ ಮತ್ತೊಂದೆಡೆ ಸಮರ್ಥಿಸಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಹೇಳಿಕೆಗೆ ಸ್ಯಾಂಡಲ್ ವುಡ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ನಟಿ ರಮ್ಯಾ ಮಾಧ್ಯಮಗಳಿಗೆ ಡಿಕೆಶಿ ಹೇಳಿದ್ದು ಸರಿ ಎಂದಿದ್ದರು. ಬಳಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಕೆಲವರಿಗೆ ಹೊರಗೆ ಬಹಿರಂಗವಾಗಿ ಹೇಳಿಕೆ ನೀಡಲು ಭಯವಿರುತ್ತದೆ. ಹೀಗಾಗಿ ಆ ರೀತಿ ಹೇಳಿಕೆ ನೀಡಬಾರದಿತ್ತು ಎಂದರು.
ಇಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ವಿವಾದಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಕೋರ್ಟ್ ಗೆ ಹಾಜರಾದ ನಟಿ ರಮ್ಯಾ, ಡಿಕೆ ಶಿವಕುಮಾರ್ ಬಳಸಿರುವ ನಟ್ಟು ಬೋಲ್ಟ್ ಪದವನ್ನು ಖಂಡಿಸಿದ್ದು, ಅವರ ಹೇಳಿಕೆಯನ್ನು ಇನ್ನೊಂದೆಡೆ ಸಮರ್ಥಿಸಿಕೊಂಡಿದ್ದಾರೆ.
ಡಿಸಿಎಂ ಡಿಕೆಶಿವಕುಮಾರ್ ಅವರ ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ. ಅವರು ಹಾಗೆ ಹೇಳಬಾರದಿತ್ತು. ಆದರೆ ಯಾರನ್ನೂ ಬೆದರಿಸುವ ಉದ್ದೇಶವಲ್ಲ ಎಂದು ಅವರೇ ಹೇಳಿದ್ದಾರೆ. ಆದರೆ ಅವರು ಹೇಳಿದ ಹೇಳಿಕೆ ತಪ್ಪು. ಹಲವರಿಗೆ ಇದು ಇಷ್ಟವಾಗಿಲ್ಲ. ಈ ವಿಚಾರವಾಗಿ ಡಿಕೆಶಿ ಕ್ಲಾರಿಟಿ ಕೊಟ್ಟಿದ್ದಾರೆ. ಹೀಗಾಗಿ ಇದನ್ನು ಇಲ್ಲಿಗೇ ಬಿಡುವುದು ಒಳ್ಳೆಯದು ಎಂದಿದ್ದಾರೆ.