ಬೆಂಗಳೂರು: ಡಾಲಿ ಧನಂಜಯ್-ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮತ್ತೊಂದು ಬಹುನಿರೀಕ್ಷೆಯ ಚಿತ್ರ ಉತ್ತರಕಾಂಡ ಇದೇ ವರ್ಷ ಡಿಸೆಂಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ, ಈ ವರ್ಷಾಂತ್ಯದಲ್ಲಿ ಸಾಲುಸಾಲು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಮತ್ತೊಂದು ಸುತ್ತಿನ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.
ಡಿಸೆಂಬರ್ ತಿಂಗಳಿನಲ್ಲಿ ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಲಿವೆ. ಏಕೆಂದರೆ, ಆ ವೇಳೆಗೆ ಕನ್ನಡದ ಸ್ಟಾರ್ ನಟದ ದೊಡ್ಡ ಬಜೆಟ್ ಸಿನಿಮಾಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಲಾಗುತ್ತದೆ. ದರ್ಶನ್, ಧ್ರುವ ಸರ್ಜಾ ಮತ್ತು ಡಾಲಿ ಧನಂಜಯ್ ಅಭಿನಯದ ಸಿನಿಮಾಗಳನ್ನು ಡಿಸೆಂಬರ್‌ನಲ್ಲಿ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಪ್ರಕಾಶ್ ವೀರ್ ನಿರ್ದೇಶನದ ಡೆವಿಲ್ ಈ ವರ್ಷ ಕ್ರಿಸ್‌ಮಸ್‌ಗೆ ತೆರೆಕಾಣಲಿದೆ ಎಂದು ವೈಷ್ಣೋ ಸ್ಟುಡಿಯೋಸ್ ಈಗಾಗಲೇ ಘೋಷಿಸಿದೆ. ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ಬಹುಭಾಷಾ ಚಿತ್ರ ಕೆಡಿ ಕೂಡ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ. ಇದೀಗ ಆ ಸಾಲಿಗೆ ಡಾಲಿ ಧನಂಜಯ್ ಚಿತ್ರ ಸೇರ್ಪಡೆಯಾಗಿದೆ.
ಉತ್ತರಕಾಂಡ ಸಿನಿಮಾದ ಚಿತ್ರೀಕರಣ ಬೆಳಗಾವಿಯಲ್ಲಿ ಎರಡನೇ ಶೆಡ್ಯೂಲ್‌ಗೆ ಸಾಗಿದ್ದು, ಶಿವಣ್ಣ ಇತ್ತೀಚೆಗೆ ಸೆಟ್‌ಗೆ ಸೇರಿದ್ದಾರೆ. ಉತ್ತರಕಾಂಡ ಸಿನಿಮಾ ಟಗರು ಖ್ಯಾತಿಯ ಹಿಟ್ ಜೋಡಿ ಶಿವಣ್ಣ ಮತ್ತು ಧನಂಜಯ್ ಅವರನ್ನು ಬೆಳ್ಳಿತೆರೆಯಲ್ಲಿ ಮತ್ತೆ ಒಂದಾಗಿಸುವುದು ಮಾತ್ರವಲ್ಲದೆ ತಮಿಳು ನಟಿ ಐಶ್ವರ್ಯಾ ರಾಜೇಶ್ ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದಲ್ಲದೆ, ಚಿತ್ರದಲ್ಲಿ ಶಿವಣ್ಣ ಜೊತೆಗೆ ಭಾವನಾ ಮತ್ತು ದಿಗಂತ್ ಮತ್ತು ಚೈತ್ರ ಜೆ ಆಚಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು, ಉಮಾಶ್ರೀ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.