ಚಪಾತಿ ಮಾಡಲು ಹಿಟ್ಟು ಕಲಸುತ್ತಿದ್ದ ನೀರಜ್‌ನ ಅಮ್ಮ ನೀರಜ್‌ಗೆ ಆಟವಾಡಲು ಸ್ವಲ್ಪ ಹಿಟ್ಟನ್ನು ಕೊಡುತ್ತಾಳೆ.
ನೀರಜ್ ಆ ಹಿಟ್ಟಿನಿಂದ ಏನು ಮಾಡಲಿ ಎಂದು ಯೋಚಿಸಿ ಕೊನೆಗೆ ತನ್ನದೇ ಕುಶಲತೆಯನ್ನು ಉಪಯೋಗಿಸಿ ವಿವಿಧ ಪ್ರಾಣಿಗಳ ಆಕೃತಿಯನ್ನು ಮಾಡುತ್ತಾನೆ.
ಮೊದಲಿಗೆ ಹಿಟ್ಟನ್ನು ಹಿಂದೆ ಮುಂದೆ ತಿರುಚಿ ಉದ್ದನೆ ಹಗ್ಗ ಮಾಡಿ, ಹಗ್ಗದ ಒಂದು ತುದಿಯಲ್ಲಿ ಎರಡು ಸಣ್ಣ ಸಣ್ಣ ಕಣ್ಣು ಇಟ್ಟು ಮತ್ತೊಂದು ಬದಿಯಲ್ಲಿ ಚೂಪಾದ ಬಾಲ ಮಾಡಿ ಅದಕ್ಕೆ ಹಾವಿನ ರೂಪ ಕೊಡುತ್ತಾನೆ.
ನಂತರ ಹಿಟ್ಟನ್ನು ಚೆನ್ನಾಗಿ ತಟ್ಟಿ ಪುಟ್ಟ ಪುಟ್ಟ ಎರಡು ಕಣ್ಣುಗಳನ್ನು ಇಟ್ಟು ಇನ್ನೊಂದು ತುದಿಯಲ್ಲಿ ಉದ್ದನೆಯ ಬಾಲವನ್ನು ಮಾಡಿ ಅದಕ್ಕೆ ಇಲಿಯ ರೂಪವನ್ನು ನೀಡುತ್ತಾನೆ.
ಮತ್ತೊಮ್ಮೆ ಆ ಹಿಟ್ಟನ್ನು ಒಂದು ದೊಡ್ಡ ಹಾಗೂ ಒಂದು ಸಣ್ಣ ಉಂಡೆಯಾಗಿ ಮಾಡಿ,ದೊಡ್ಡ ಉಂಡೆಯ ಮೇಲೆ ಸಣ್ಣ ಉಂಡೆಯನ್ನು ಇಟ್ಟು, ಅದಕ್ಕೆ ಕಣ್ಣು, ಮೂಗು,ಬಾಲ ಕಿವಿಗಳನ್ನು ಮಾಡಿ ಬೆಕ್ಕಿನ ಆಕೃತಿಯನ್ನು ಮಾಡುತ್ತಾನೆ.
ಕೊನೆಯಲ್ಲಿ ನೀರಜ್ ಹಿಟ್ಟನ್ನು ಮಡಚಿ ಉರುಟುರುಟು ಉಂಡೆ ಮಾಡಿ ಅದನ್ನು ಚಪ್ಪಟೆಯಾಗಿ ತಟ್ಟಿ ದೊಡ್ಡ ವೃತ್ತ ಮಾಡುತ್ತಾನೆ. ಅವನ ಅಮ್ಮ ಅದನ್ನು ಕಾವಲಿಯಲ್ಲಿ ಇಟ್ಟು ಕಾಯಿಸುತ್ತಾಳೆ. ನೀರಜ್ ತಾನು ಮಾಡಿದ ಚಪಾತಿಯನ್ನು ಖುಷಿಯಿಂದಲೇ ತಿನ್ನುತ್ತಾನೆ.
ಚಪಾತಿ ಹಿಟ್ಟಿನಿಂದ ವಿವಿಧ ಪ್ರಾಣಿಗಳ ಆಕೃತಿಗಳನ್ನು ನೀರಜ್‌ನಿಂದ ಮಾಡಿಸುವ ಮೂಲಕ ಲೇಖಕಿ ನಂದಿನಿ ನಾಯರ್ ಹಾವು, ಬೆಕ್ಕು, ಇಲಿ ಮುಂತಾದ ಪ್ರಾಣಿಗಳ ಪರಿಚಯವನ್ನು ಈ ಕಥೆಯಲ್ಲಿ ಮಕ್ಕಳಿಗೆ ಮಾಡಿಸುತ್ತಾರೆ. ಅಲ್ಲದೆ ಹಿಟ್ಟನ್ನು ಕಿವುಚಿ, ಚಿವುಟಿ, ತಟ್ಟಿ, ಚಪ್ಪಟೆಯಾಗಿ ಉರುಟಾಗಿ ಹೊರಳಿಸಿ ಕಾಯಿಸಿದರೆ ರುಚಿಯಾದ ಚಪಾತಿಯಾಗುತ್ತದೆ ಎಂಬುದಾಗಿ ಚಪಾತಿ ಮಾಡುವ ರೀತಿಯನ್ನು ಮಕ್ಕಳಿಗೆ ಸುಲಭ ರೀತಿಯಲ್ಲಿ ಈ ಕಥೆಯ ಮೂಲಕ ತಿಳಿಯಪಡಿಸುತ್ತಾರೆ.
ಪ್ರೊಯಿತಿ ರಾಯ್ ಅವರ ಚಿತ್ರವು ತುಂಬಾ ಅರ್ಥಪೂರ್ಣವಾಗಿದ್ದು ಹಿಟ್ಟಿನಿಂದ ವಿವಿಧ ಆಕೃತಿಗಳನ್ನು ಮಾಡುವ ಹಾಗೂ ಚಪಾತಿ ಮಾಡುವ ವಿಧಾನದ ಪ್ರತಿ ಹಂತವನ್ನು ಮಕ್ಕಳು ಸುಲಭವಾಗಿ ಅರ್ಥೈಸುವ ರೀತಿಯಲ್ಲಿ ಚಿತ್ರಿಸಿದ್ದಾರೆ.