ಒಂದು ಊರಿನಲ್ಲಿ ಒಂದು ಕತ್ತೆ ಇತ್ತು. ಅದು ತನ್ನ ದನಿಕನಿಗಾಗಿ ಬಹಳ ವರ್ಷದಿಂದ ಪ್ರಾಮಾಣಿಕನಾಗಿ ದುಡಿದಿತ್ತು.
ಆದರೆ ಈಗ ಕತ್ತೆ ತನ್ನ ಎಲ್ಲಾ ಶಕ್ತಿಗಳನ್ನು ಕಳೆದು ಕೊಂಡು, ಕಠಿಣ ಕೆಲಸ ಮಾಡಲು ಸಾದ್ಯವಾಗುತ್ತಿರಲಿಲ್ಲ. ಹಾಗಾಗಿ ಕತ್ತೆಯ ಧನಿಕ ನಾನು ಇದರ ಮಾಂಸ ಮಾರಿ ಎಷ್ಟು ಹಣ ಗಳಿಸಬಹುದು ಎಂಬ ಬಗ್ಗೆ ಚಿಂತಿಸಲು ಪ್ರಾರಂಭಿಸಿದ್ದ. ಇದನ್ನು ಅರಿತ ಕತ್ತೆ ಇನ್ನು ಇಲ್ಲಿ ಉಳಿದರೆ ಉಳಿಗಾಲವಿಲ್ಲ ಎಂದು ಯೋಚಿಸಿ ಪಟ್ಟಣದ ಕಡೆ ಹೋಗುವ ಯೋಚನೆ ಮಾಡಿತು. ನಂತರ ತಾನು ಪಟ್ಟಣದ ಸಂಗೀತಗಾರನಾದರೆ ಹೇಗೆ ಎಂದು ಯೋಚಿಸಿ ಪಟ್ಟಣದ ಕಡೆ ಮುನ್ನಡೆಯಿತು.
ಹೀಗೆ ದಾರಿಯಲ್ಲಿ ಹೋಗುತ್ತಿರುವಾಗ ಭೇಟೆ ನಾಯಿಯೊಂದು ರಸ್ಥೆ ಬದಿಯಲ್ಲಿ ಮಲಗಿದ್ದನ್ನು ಕಂಡಿತು. ಆ ನಾಯಿ ಆಕಳಿಸುತ್ತಾ ಬಹಳ ಬೇಸರದಿಂದ ರಸ್ಥೆ ಬದಿಯಲ್ಲಿ ಮಲಗಿತ್ತು. ಇದನ್ನು ಕಂಡ ಕತ್ತೆ ಏಕೆ ಬಹಳ ಬೇಸರದಿಂದ ಇದ್ದಿ ಎಂದು ಕೇಳಿತು.
ನಾಯಿ: ನಾನು ದಿನಗಳೆದಂತೆ ಮುದುಕನಾಗುತ್ತಿದ್ದು ನನಗೆ ಭೇಟೆಮಾಡಲು ಸಾದ್ಯವಾಗುತ್ತಿಲ್ಲ. ಅದಕ್ಕಾಗಿ ನನ್ನ ಒಡೆಯ ನನಗೆ ಸಾಯುವಂತೆ ಹೊಡೆದ. ನಾನು ಅಲ್ಲಿಂದ ಹೇಗಾದರು ತಪ್ಪಿಸಿ ಕೊಂಡು ಬಂದೆ. ಆದರೆ ನನ್ನ ಮುಂದಿರುವ ದೊಡ್ಡ ಸಮಸ್ಯೆ ಎಂದರೆ ಮುಂದೆ ನಾನು ಹೇಗೆ ಜೀವಿಸುವುದು ಎಂಬುದು ಎಂದು ಬೇಸರದಿಂದ ಹೇಳಿತು.
ಕತ್ತೆ: ನಾನು ಪಟ್ಟಣಕ್ಕೆ ಸಂಗೀತಗಾರನಾಗಲು ಹೋಗುತ್ತಿದ್ದೇನೆ. ಒಂದು ವೇಳೆ ನೀನು ನನ್ನ ಜತೆ ಬಂದು ಸಂಗೀತಗಾರನಾಗಿ ಸೇರು. ನೀನು ವಾದ್ಯ ಊದಿದರೆ, ನಾನು ಡ್ರಂ ಭಾರಿಸುತ್ತೇನೆ ಎಂದು ತಿಳಿಸಿತು.
ಇದರಿಂದ ಹರ್ಷಚಿತ್ತವಾದ ನಾಯಿ, ಕತ್ತೆಯ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತು. ಹೀಗೆ ಒಟ್ಟಿಗೆ ಮುಂದೆ ಸಾಗುತ್ತಿರುವಾಗ ಬೆಕ್ಕೊಂದು ಪೇಲವ ಮುಖ ಹೊತ್ತು ಕೊಂಡು ದಾರಿ ಮದ್ಯದಲ್ಲಿ ಕುಳಿತಿರುದನ್ನು ಕಂಡಿತು.
ಕತ್ತೆ: ಏಕೆ ಇಲ್ಲಿ ಕೂತಿರುವೆ? ಬೆಕ್ಕು: ನನಗೆ ಪ್ರಾಯವಾಗುತ್ತಿದೆ. ನಾನು ಇಲಿಯನ್ನು ಹಿಡಿಯುವ ಬದಲು ಹೆಚ್ಚಾಗಿ ಬೆಂಕಿ ಮುಂದೆ ಕೂತಿರಲು ಬಯಸುತ್ತೇನೆ. ಒಡತಿ ನನ್ನನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಲು ಪ್ರಯತ್ನಿಸುತ್ತಿದ್ದಾಳೆ. ಅದಕ್ಕೆ ನಾನು ಅಲ್ಲಿಂದ ಓಡಿ ಬಂದೆ. ಆದರೆ ಈಗ ನನಗೆ ಏನು ಮಾಡುವುದು ಎಂದು ತಿಳಿದಿಲ್ಲ.
ಕತ್ತೆ: ನೀನು ನಮ್ಮ ಜತೆ ಪಟ್ಟಣಕ್ಕೆ ಬಾ, ನಿನಗೆ ರಾತ್ರಿ ಸಂಬಂಧಿತ ಸಂಗೀತದ ಬಗ್ಗೆ ಹೆಚ್ಚು ತಿಳಿದಿದೆ. ಹಾಗಾಗಿ ನೀನು ಪಟ್ಟಣದ ಸಂಗೀತಗಾರನಾಗಲು ಸಾದ್ಯ. ಬೆಕ್ಕು ಇವರ ಮಾತಿಗೆ ಒಪ್ಪಿ ಅವರ ಜತೆ ಸೇರಿ ಕೊಂಡು, ಒಟ್ಟಾಗಿ ಮುಂದೆ ಸಾಗಿದವು ಹೀಗೆ ಹೋಗುತ್ತಿರುವಾಗ ಕೋಳಿಯೊಂದು ಬಹಳ ಬೇಸರದಿಂದ ಎಲ್ಲಾ ರೀತಿಯ ಶಬ್ದದಿಂದ ಕೂಗಾಡುತ್ತಿತ್ತು. ಕತ್ತೆ: ಏಕೆ ನೀನು ಇಷ್ಟು ಬೇಸರದಿಂದ ಕೂಗಾಡುತ್ತಿದ್ದಿ?
ಕೋಳಿ: ಭಾನುವಾರದಂದು ಮನೆಗೆ ನಂಟರು ಬರುತ್ತಿದ್ದು, ಅವರ ಊಟಕ್ಕಾಗಿ ಒಡತಿ ನನ್ನನ್ನು ಸೂಪ್ ಮಾಡುವಂತೆ ಅಡಿಗೆಯವನಿಗೆ ತಿಳಿಸಿದ್ದಾಳೆ ಮತ್ತು ಈ ಸಂಜೆ ನನ್ನ ತಲೆ ಕಡಿಯಲಾಗುವುದು. ಹಾಗಾಗಿ ಎಷ್ಟು ಸಾದ್ಯವೂ ಅಷ್ಟು ಜೋರಿನಿಂದ ನಾನು ಕೂಗಾಡುತ್ತಿದ್ದೇನೆ.
ಕತ್ತೆ: ನೀನು ಏಕೆ ನಮ್ಮ ಜತೆ ಬರಬಾರದು . ನಾವು ಪಟ್ಟಣಕ್ಕೆ ಹೋಗಿ ಸಂಗೀತಗಾರರಾಗಲಿದ್ದೇವೆ. ನೀನು ಉತ್ತಮವಾಗಿ ಹಾಡುತ್ತಿ. ಇದಕ್ಕಿ ಒಪ್ಪಿದ ಕೋಳಿ ಇವರ ಜತೆ ಸೇರಿ ಪಟ್ಟಣದ ಕಡೆ ಮುಂದುವರಿಯಿತು. ಹೀಗೆ ಹೋಗುತ್ತಾ ರಾತ್ರಿಯಾಯಿತು. ನಡೆದು ಸುಸ್ತಾದ ಇವುಗಳು ದಾರಿ ಮದ್ಯದಲ್ಲಿ ಸಿಕ್ಕಿದ ಕಾಡಿನಲ್ಲಿ ತಂಗಲು ನಿರ್ಧರಿಸಿದವು. ಹೀಗೆ ಮರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಕೋಳಿ ಮತ್ತು ಬೆಕ್ಕಿಗೆ ಸ್ವಲ್ಪ ದೂರದಿಂದ ಮನೆಯೊಂದರಿಂದ ದೀಪ ಬೆಳಗುತ್ತಿರುವುದು ಕಂಡುಬಂತು. ಬೆಕ್ಕು: ಇಲ್ಲೇ ಹತ್ತಿರದಲ್ಲಿ ಮನೆಯೊಂದು ಕಾಣಿಸುತ್ತಿದೆ. ಅಲ್ಲಿ ಏನಾದರು ತಿನ್ನಲು ಸಿಗಬಹುದು. ನಾವು ಅಲ್ಲಿಗೆ ಹೋಗೋಣ.
ಇದಕ್ಕೆ ಎಲ್ಲರೂ ಒಪ್ಪಿಕೊಂಡು, ವೇಗದಲ್ಲಿ ಆ ಮನೆಯ ಕಡೆ ಸಾಗಿದವು. ಉದ್ದವಾಗಿದ್ದ ಕತ್ತೆ ಕಿಟಕಿಯಿಂದ ಇಣುಕಿ ಒಳಗೆ ನೋಡಿತು. ಒಳಗಡೆ ಕಾಡುಗಳ್ಳರು ಮಾಂಸದಿಂದ ತಂಬಿದ್ದ ಟೇಬಲ್ ಎದುರು ಕುಳಿತು ಊಟಮಾಡುತ್ತಿದ್ದ ದೃಷ್ಯವನ್ನು ಕಂಡಿತು. ಈ ಬಗ್ಗೆ ತನ್ನ ಸಹವರ್ತಿಗಳಿಗೆ ತಿಳಿಸಿತು.ಬಹಳ ಹಸಿವಿನಿಂದ ಬಳಲಿದ್ದರಿಂದ ಅವರನ್ನು ಮನೆಯಿಂದ ಓಡಿಸಿ, ಮಾಂಸವನ್ನು ತಿನ್ನುವುದಕ್ಕೆ ಉಪಾಯ ಹೂಡಲು ಶುರುಹಚ್ಚಿದವು. ಹೀಗೆ ಎಲ್ಲವೂ ಒಂದು ನಿರ್ಧಾರಕ್ಕೆ ಬಂದವು.
ಕತ್ತೆ ಕಿಟಕಿಯ ಬದಿಗೆ ತನ್ನ ಎದುರಿನ ಕಾಲುಗಳನ್ನು ಊರಿ ಎತ್ತರವಾಗಿ ನಿಂತಿತು. ಕತ್ತೆಯ ಮೇಲೆ ನಾಯಿ ನಿಂತಿತು. ನಾಯಿಯ ಮೇಲೆ ಬೆಕ್ಕು, ಬೆಕ್ಕಿನ ಮೇಲೆ ಕೋಳಿ ಹೀಗೆ ಒಂದರ ಮೇಲೊಂದರಂತೆ ನಿಂತು ತಮ್ಮ ಶಕ್ತಿಮೀರಿ ಜೋರಿನಿಂದ ಕಿರುಚಲು ಪ್ರಾರಂಭಿಸಿದವು. ಈ ಅನಿರೀಕ್ಷಿತ ಕಿರುಚಾಟದಿಂದ ಬೆಚ್ಚಿಬಿದ್ದ ಕಾಡುಗಳ್ಳರು ನಮ್ಮ ಮನೆಗೆ ಯಾವುದೋ ಭೂತ ಪ್ರವೇಶಿಸಿದೆ ಎಂದು ತಿಳಿದು ಭಯದಿಂದ ಎದ್ದು ಬಿದ್ದು ಕಾಡಿನ ಒಳಗೆ ಓಡಲು ಶುರುಹಚ್ಚಿದರು.
ಅವರು ಓಡಿದ ಕೂಡಲೇ ಈ 4 ಸಹವರ್ತಿಗಳು ಒಳಗೆ ಬಂದು ಟೇಬಲ್ ಎದುರು ಕುಳಿತು ಅಲ್ಲಿದ್ದ ಮಾಂಸವನ್ನು ಗಬಗಬನೆ ತಿನ್ನಲು ಪ್ರಾರಂಭಿಸಿದವು. ಎಲ್ಲಾ ತಿಂದು ತೇಗಿದ ನಂತರ ನಡೆದು ಸುಸ್ತಾದ ಸಹವರ್ತಿಗಳು ವಿಶ್ರಾಂತಿ ಪಡೆಯಲು ತಮ್ಮ ತಮ್ಮ ಜಾಗಗಳನ್ನು ಹುಡುಕಲು ಪ್ರಾರಂಭಿಸಿದವು. ಅಭ್ಯಾಸ ಬಲದಂತೆ ಕತ್ತೆ ಹುಲ್ಲಿನ ಮೆದೆ ಇರುವ ಸ್ಥಳದಲ್ಲಿ ಹೋಗಿ ಮಲಗಿತು. ನಾಯಿ ಬಾಗಿಲ ಹೊರಗಡೆ ಮಲಗಿತು. ಬೆಕ್ಕು ಅಲ್ಲೇ ಇದ್ದ ಬೂದಿಯ ಮೇಲೆ ಹೋಗಿ ಮಲಗಿದರೆ, ಕೋಳಿ ಅಲ್ಲೇ ಮೇಲೆ ಹಾದು ಹೋಗಿದ್ದ ರೆಂಬೆಯ ಮೇಲೆ ಕುಳಿತು ಕೊಂಡಿತು.
ಹೀಗೆ ಮದ್ಯರಾತ್ರಿಯಾದಾಗ ತಮ್ಮ ಮನೆಯಿಂದ ಯಾವುದೇ ದೀಪ ಕಾಣಿಸದ್ದನ್ನು ಅರಿತ ಕಾಡುಗಳ್ಳರು ನಿದಾನವಾಗಿ ಮನೆಯ ಕಡೆ ಬಂದರು. ಕಳ್ಳರ ನಾಯಕ ಮನೆಯಲ್ಲಿನ ಪರಿಸ್ಥಿತಿ ನೋಡಿ ಬರುವಂತೆ ಕಳುಹಿಸುತ್ತಾನೆ. ಆತ ಮೆಲ್ಲನೆ ಭಯದಿಂದ ಮನೆಯೊಳಗೆ ಹೋಗಿ ದೀಪ ಉರಿಸಲು ಪ್ರಯತ್ನಿಸುತ್ತಾನೆ. ಅಲ್ಲೇ ಮಲಗಿದ್ದ ಬೆಕ್ಕು ಇದನ್ನು ಅರಿತು ದೊಪ್ಪನೆ ಕಳ್ಳನೆ ಮೇಲೆ ಎಗರಿ ಅವನ ಮುಖವನ್ನು ಪರಚಿ ಹಾಕಿತು. ಹೆದರಿ ಹೋದ ಕಳ್ಳ ಬಾಗಿಲಿನ ಕಡೆ ಓಡುತ್ತಾನೆ. ಅಲ್ಲೇ ಮಲಗಿದ್ದ ನಾಯಿ ಕಳ್ಳನ ಕಾಲನ್ನು ಚೆನ್ನಾಗಿ ಕಚ್ಚುತ್ತದೆ.
ಕಳ್ಳ ಆಯತಪ್ಪಿ ಹುಲ್ಲಿನ ರಾಶಿಗೆ ಬೇಳುತ್ತಾನೆ. ಅಲ್ಲೇ ಇದ್ದ ಕತ್ತೆ ತನ್ನ ಕಾಲಿನಿಂದ ಬಲವಾಗಿ ಕಳ್ಳನಿಗೆ ಒದೆಯುತ್ತದೆ. ಈ ಕಡೆ ಕೋಳಿ ತನ್ನ ರೆಕ್ಕೆಗಳಿಂದ ಬಲವಾಗಿ ಕಳ್ಳನ ಕೆನ್ನೆಗೆ ಹೊಡೆದು, ಕರ್ಕಶವಾಗಿ ಕೂಗುತ್ತದೆ. ಕಳ್ಳ ಹೆದರಿಕೆಯಿಂದ ನಾಯಕನ ಕಡೆ ಓಡಿ ಹೋಗಿ, ಆ ಮನೆಯಲ್ಲಿ ಭಯಾನಕ ಮಾಯಗಾತಿ ಇದ್ದ ಅವಳು ತನ್ನ ಉದ್ದನೆಯ ಉಗುರುಗಳಿಂದ ನನ್ನ ಮುಖವನ್ನು ಪರಚಿದಳು.
ದ್ವಾರದ ಮುಂಬಾಗ ಚೂರಿ ಹಿಡಿದು ಕೊಂಡಿದ್ದ ಒಬ್ಬ ವ್ಯಕ್ತಿ ನನ್ನ ಕಾಲಿಗೆ ಇರಿದರೆ, ಅಲ್ಲೇ ಇದ್ದ ಹುಲ್ಲಿನ ಮೆದೆಯಲ್ಲಿ ವಿಕಾರರೂಪಿ ಪ್ರಾಣಿಯೊಂದು ಮಲಗಿತ್ತು ಅದು ಕೋಲಿನಿಂದ ಬಲವಾಗಿ ನನಗೆ ಹೊಡೆಯಿತು. ಇದರ ಜತೆಗೆ ಮಹಡಿ ಮೇಲೆ ಒಬ್ಬ ನ್ಯಾಯವಾದಿ ಕುಳಿತಿದ್ದನು ಅವನು ಜೋರಾಗಿ ಆ ದ್ರೋಹಿಯನ್ನು ಮೇಲಕ್ಕೆ ತನ್ನಿ ಎಂದು ಗರ್ಜಿಸಿತು. ನಾನು ಭಯದಿಂದ ಎದ್ದು ಬಿದ್ದು ಓಡಿ ಬಂದೆ.
ಇದನ್ನು ಕೇಳಿದ ಕಾಡುಗಳ್ಳರು ತಮ್ಮ ಮನೆಗೆ ಹೋಗುವ ಧೈರ್ಯ ಮಾಡಲಿಲ್ಲ. ಆದರೆ ಈ ನಾಲ್ವರು ಪಟ್ಟಣದ ಸಂಗೀತಗಾರರು ಹಾಯಾಗಿ ಅಲ್ಲೇ ಜೀವಿಸಿದವು.