ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಅಮ್ಮಿಣಿಕುಟ್ಟಿಗೆ ಬಿಸಿಬಿಸಿ ದೋಸೆ ಮತ್ತು ನೀರುಳ್ಳಿಚಟ್ನಿ ತಿನ್ನಬೇಕೆಂಬ ಆಸೆಯಾಗುತ್ತದೆ.
ಅದಕ್ಕಾಗಿ ಅವಳು ನೀರುಳ್ಳಿ, ಉಪ್ಪು, ಮೆಣಸಿನಕಾಯಿ ಮತ್ತು ಕೊನೆಯಲ್ಲಿ ಇದ್ದ ಒಂದೇ ಒಂದು ಮೆಣಸಿನಕಾಳನ್ನು ಅರೆಯುವ ಕಲ್ಲಿಗೆ ಸೇರಿಸಿ ರುಬ್ಬಲು ಪ್ರಾರಂಭಿಸುವಾಗ ಈ ಪುಟಾಣಿ ಮೆಣಸಿನಕಾಳು ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ.
ಮೆಣಸಿನಕಾಳು ಇಲ್ಲದೆ ನೀರುಳ್ಳಿ ಚಟ್ನಿ ಮಾಡುವುದಾದರೂ ಹೇಗೆ ಎಂದು ಯೋಚಿಸಿದ ಅಮ್ಮಿಣಿಕುಟ್ಟಿ ಆ ಮೆಣಸಿನಕಾಳನ್ನು ಬೆನ್ನತ್ತಿ ಓಡತೊಡಗುತ್ತಾಳೆ.
ಈ ಮೆಣಸಿನಕಾಳು ಅಮ್ಮಿಣಿಕುಟ್ಟಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಾರುತ್ತಾ, ಜಿಗಿಯುತ್ತಾ, ನೆಗೆಯುತ್ತಾ ಹಾಗೂ ಓಡುತ್ತಾ ಹೋಗುತ್ತಿರುವಾಗ ದಾರಿಯಲ್ಲಿ ಇದನ್ನು ಹಿಡಿಯಲು ಪಾರ್ವತಿ ಚೇಚಿ, ನೆಟ್ಟನ್ ಪಪ್ಪು ಮುಂತಾದವರು ಪ್ರಯತ್ನಿಸುತ್ತಾರೆ.
ಎಲ್ಲರ ಕೈಯಿಂದಲೂ ತಪ್ಪಿಸಿಕೊಂಡ ಈ ಮೆಣಸಿನಕಾಳು ದಿನಸಿ ಅಂಗಡಿಯ ಮೆಟ್ಟಿಲ ಮೇಲಿರುವ ದೊಡ್ಡ ಗೋಣಿಚೀಲದೊಳಗೆ ಸೇರಿಕೊಂಡು ಬಿಡುತ್ತದೆ.
ಈ ಪುಟಾಣಿ ಕಥೆಯ ಲೇಖಕಿ ಸುಚಿತ್ರಾ ರಾಮದೊರೈ ಅವರು ಮೆಣಸಿನಕಾಳು ಅಮ್ಮಿಣಿಕುಟ್ಟಿಯಿಂದ ತಪ್ಪಿಸಿಕೊಂಡು ಓಡುವ ರೀತಿಯನ್ನು ಹಾಗೂ ಆ ಮೆಣಸಿನಕಾಳಿಗಾಗಿ ಅಮ್ಮಿಣಿಕುಟ್ಟಿ ಬೆನ್ನತ್ತುವ ರೀತಿಯನ್ನು ಅತ್ಯಂತ ಸ್ವಾರಸ್ಯಕರವಾಗಿ ತಿಳಿಸಿದ್ದಾರೆ.
ಅಲ್ಲದೆ ದಾರಿಯಲ್ಲಿ ತನ್ನನ್ನು ಹಿಡಿಯಲು ಪ್ರಯತ್ನಿಸುವ ಪಾರ್ವತಿ ಚೇಚಿ, ನೆಟ್ಟನ್ ಪಪ್ಪು ಮುಂತಾದವರಿಂದ ತಪ್ಪಿಸಿಕೊಳ್ಳಲು ಮೆಣಸಿನಕಾಳು ಹೂಡುವ ಉಪಾಯವು ಅತ್ಯಂತ ಕುತೂಹಲಕಾರಿಯಾಗಿದೆ.
ಮಕ್ಕಳಿಗಾಗಿ ಅನೇಕ ವರ್ಷಗಳಿಂದ ಚಿತ್ರಗಳನ್ನು ಬರೆಯುತ್ತಾ ಬಂದ ಅಶೋಕ್ ರಾಜಗೋಪಾಲನ್ ಅವರು ಬರೆದ ಚಿತ್ರವು ಇಲ್ಲಿನ ಕಥೆಯ ಅಮ್ಮಿಣಿಕುಟ್ಟಿ ಮತ್ತು ಮೆಣಸಿನಕಾಳಿನ ಓಟಕ್ಕೆ ಸರಿಸಾಟಿಯಾಗಿದೆ.