ಮಕ್ಕಳೇ ಗುಲಾಬಿ ಹೂಗಳು ಎಂದ ಚಾಚಾ

ಸರಿ ಸುಮಾರು ನೂರು ವರ್ಷಗಳ ಹಿಂದೆ ಅಂದರೆ, 1889 ನವೆಂಬರ್ 14 ರಂದು ಅಲಹಾಬಾದ್‌ ನಗರದಲ್ಲಿ ಪ್ರಖ್ಯಾತ ವಕೀಲರಾದ ಮೋತಿಲಾಲ್ ನೆಹರು ಮತ್ತು ಸ್ವರೂಪ್ ರಾಣಿ ದಂಪತಿಗಳ ಮನೆಯಲ್ಲಿ ಮಗುವೊಂದು ಜನಿಸಿತು. ತಂದೆ ತಾಯಿಗಳು ಮುದ್ದಿನಿಂದ ಮಗುವನ್ನು ಜವಾಹರಲಾಲ್ ಎಂದು ನಾಮಕರಣ ಮಾಡಿದರು. ಮಗು ತುಂಬಾ ಬುದ್ಧಿವಂತನಾಗಿದ್ದು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಆಡುತ್ತಾಡುತ್ತಾ ಬೆಳೆಯಿತು ಈ ಮಗು.

ಜವಾಹರಲಾಲ್ ದೊಡ್ಡವನಾದಾಗ, ತಂದೆ ಮೋತಿಲಾಲ್ ನೆಹರು ಕೇಂಬ್ರಿಡ್ಜ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ಮಗನನ್ನು ಇಂಗ್ಲೆಂಡ್‌ಗೆ ಕಳುಹಿಸಿದರು. ಶಿಕ್ಷಣ ಮುಗಿಸಿದ ನಂತರ ಭಾರತಕ್ಕೆ ಮರಳಿದ ನಂತರ ಜವಾಹರಲಾಲ್ ನೆಹರು ಹಣ ಗಳಿಸುವುದಕ್ಕಾಗಿ ವೃತ್ತಿ ಮಾಡುವುದು ಸರಿಯಲ್ಲ. ಅದು ನನಗೆ ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ತಂದೆಗೆ ಹೇಳಿದರು. ವೃತ್ತಿಯನ್ನು ಬಿಟ್ಟು ದೇಶಸೇವೆ ಹಾಗೂ ತುಳಿತಕ್ಕೆ ಒಳಗಾದವರ ಮತ್ತು ಬಡವರ ಸೇವೆಯೇ ನನ್ನ ಜೀವನದ ಗುರಿ ಎಂದು ಸಾರಿದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲವದು. ಕಾಂಗ್ರೆಸ್‌ನಲ್ಲಿ ಸೇರಿ ಗಾಂಧೀಜಿಯವರು ಆರಂಭಿಸಿದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರಲ್ಲದೇ ಅಲ್ಪ ಸಮಯದಲ್ಲಿ ಉತ್ತಮ ವಾಗ್ಮಿಗಳೆಂದು ಹೆಸರುವಾಸಿಯಾದರು. ಪ್ರಾಮಾಣಿಕ ಮತ್ತು ನಿಸ್ವಾರ್ಥ ರಾಜಕಾರಣಿಯಾದ ಜವಾಹರಲಾಲ್ ನೆಹರು ಸ್ವಾತಂತ್ರ್ಯ ದೊರಕಿದ ಕೂಡಲೇ ತಮ್ಮ ಕಾರ್ಯದಕ್ಷತೆಯಿಂದಾಗಿ ದೇಶದ ಮೊಟ್ಟಮೊದಲ ಪ್ರಧಾನಿಯಾದರು.

ಗುಲಾಬಿ ಹೂವಿನ ಬಗ್ಗೆ ಹಾಗೂ ಮಕ್ಕಳಿಗೆ ಅವರು ಧಾರೆಯರೆಯುತ್ತಿದ್ದ ಪ್ರೀತಿಯ ಕುರಿತು ಜಗತ್ತಿಗೇ ಗೊತ್ತಿದೆ. ಯಾವಾಗಲೂ ಮಕ್ಕಳನ್ನು ಹಾಗೂ ಗುಲಾಬಿ ಹೂಗಳನ್ನು ಹೋಲಿಸಿಯೇ ಮಾತನಾಡುತ್ತಿದ್ದರು. ಮಕ್ಕಳು ತೋಟದಲ್ಲಿರುವ ಹೂಗಳಿದ್ದಂತೆ ಎಂದು ಯಾವಾಗಲೂ ಹೇಳುತ್ತಿದ್ದರು.

ಮಕ್ಕಳನ್ನು ತುಂಬಾ ಪ್ರೀತಿಸಿ. ಉತ್ತಮ ಶಿಕ್ಷಣ ಕೊಡಿ ,ಅವರು ದೇಶದ ಭವಿಷ್ಯ ಮತ್ತು ನಾಳಿನ ಜವಾಬ್ದಾರಿಯುತ ಪ್ರಜೆಗಳು ಎಂದು ಹೇಳುತ್ತಿದ್ದರು. ಮಕ್ಕಳೇ ದೇಶದ ನಿಜವಾದ ಶಕ್ತಿ. ಹೆಣ್ಣು, ಗಂಡು ಎನ್ನುವ ಭೇದ ಭಾವ ಮಾಡದೇ ಉಭಯರಿಗೂ ಸಮಾನ ಅವಕಾಶ ಕೊಡಬೇಕು ಎಂದು ಪ್ರತಿಪಾದಿಸುತ್ತಿದ್ದರು. ನೆಹರು ಅವರ ಮುದ್ದಿನ ಮಗಳೇ ಇಂದಿರಾಗಾಂಧಿ. ಭಾರತದ ಮೂರನೇಯ ಪ್ರಧಾನಮಂತ್ರಿಯಾದರು.

ಮಕ್ಕಳಿಗೆ ಅವರು ತೋರಿಸುವ ಪ್ರೀತಿಯಿಂದಾಗಿ ಅವರು ಚಾಚಾ ನೆಹರು ಎಂದು ಪ್ರಸಿದ್ಧರಾದರು. ಚಾಚಾ ನೆಹರು ಅವರ ಹುಟ್ಟುಹಬ್ಬವನ್ನು "ಜಾಗತಿಕವಾಗಿ ಮಕ್ಕಳ ದಿನ" ಎಂದು ಆಚರಿಸುತ್ತಾರೆ. ಚಾಚಾ ಅವರ ಜನ್ಮದಿನಕ್ಕೆ ರಾಷ್ಟ್ರೀಯ ರಜೆ ಘೋಷಿಸಲಾಗಿದ್ದು ಅಂದು ಮಕ್ಕಳಿಗಾಗಿ ಸಂಗೀತ, ನೃತ್ಯ ಸೇರಿದಂತೆ ಶಾಲಾ ಕಾಲೇಜುಗಳಲ್ಲಿ, ದೂರದರ್ಶನ ಮತ್ತು ರೇಡಿಯೋಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತದೆ.

ಮಕ್ಕಳಿಗೆ ಉತ್ತಮ ಪರಿಸರ, ಶಿಕ್ಷಣ ಅವಕಾಶಗಳನ್ನು ನೀಡಿದಾಗ ಮಕ್ಕಳು ಬುದ್ಧಿಶಾಲಿಗಳಾಗಿ ಆರೋಗ್ಯವಂತರಾಗಿ ಬೆಳೆದಾಗ ಮಾತ್ರ ದೇಶ ಶಕ್ತಿಶಾಲಿಯಾಗುತ್ತದೆ ಎನ್ನುವ ಚಾಚಾ ಅವರ ಸಂದೇಶ ಯಾವಾಗಲೂ ಪ್ರಸ್ತುತ.

ವೆಬ್ದುನಿಯಾವನ್ನು ಓದಿ