ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಸೋಮವಾರ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. 103 ವರ್ಷ ವಯಸ್ಸಿನ ತೊಗಲು ಗೊಂಬೆ ಕಲಾವಿದೆ ಭೀಮವ್ವ ಶಿಳ್ಳೆಕ್ಯಾತರ್ ಅವರಿಗೆ ಪ್ರದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಹಿಳೆಯೊಬ್ಬರ ನೆರವಿನಿಂದ ಬಂದ ಭೀಮವ್ವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮಸ್ಕರಿಸಿದರು. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರತ್ತ ಸಾಗಿದರು. ಭೀಮವ್ವ ಮೆಲ್ಲನೆ ಹೆಜ್ಜೆ ಹಾಕುವುದನ್ನು ಗಮನಿಸಿದ ರಾಷ್ಟ್ರಪತಿ ಎದುರು ಬಂದು ಭೀಮವ್ವ ಅವರಿಗೆ ಕೈಮುಗಿದು ಪ್ರಶಸ್ತಿ ಪ್ರದಾನ ಮಾಡಿದರು.
ಭೀಮವ್ವ ಅವರು ಸಣ್ಣ ವಯಸ್ಸಿನಲ್ಲಿ ಅಪ್ಪ, ಮದುವೆಯ ನಂತರ ಪತಿ ಹಾಗೂ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಲಿತ ತೊಗಲು ಗೊಂಬೆಯಾಟವನ್ನು 103 ವರ್ಷವಾದರೂ ತನ್ನ ಜೀವನಕ್ಕೆ ಆಧಾರವಾಗಿಸಿಕೊಂಡಿದ್ದಾರೆ. ಈ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಭೀಮವ್ವ ಶಿಳ್ಳೆಕ್ಯಾತರ್ ಅವರಿಗೆ ಗೌರವ ನೀಡಲಾಗಿದೆ.
ಭೀಮವ್ವ ಅವರಿಗೆ ಪ್ರಾಯ 103 ವರ್ಷವಾದರೂ, ಕಂಠ ಮಾಸಿಲ್ಲ, ಸಂಭಾಷಣೆ ಹಾಗೂ ಹಾಡುಗಳನ್ನು ಮರೆತಿಲ್ಲ. ಹೀಗೆ ಸರಾಗವಾಗಿ ಹಾಡುತ್ತಿರುವ ಪದ್ಮಶ್ರೀ ಪುರಸ್ಕೃತೆ ಭೀಮವ್ವ ಅಜ್ಜಿ, ತೊಗಲು ಗೊಂಬೆಯಾಟದ ಕಲೆಯನ್ನು ನಶಿಸಿ ಹೋಗದಂತೆ ಕಾಪಾಡಿಕೊಂಡು ಬಂದಿದ್ದಾರೆ.
ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಈ ಕಲೆಯನ್ನು ಪರಿಚಯಿಸಿದ್ದಾರೆ. ಅಮೆರಿಕ, ಜಪಾನ್, ಸ್ವಿಡ್ಜರ್‌ಲ್ಯಾಂಡ್, ಜರ್ಮನಿ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್, ಪ್ಯಾರಿಸ್, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಭೀಮವ್ವ ಅವರು ತೊಗಲು ಗೊಂಬೆಯಾಟವನ್ನು ಪ್ರದರ್ಶಿಸಿದ್ದಾರೆ.